ಮುಂಬೈ, ಸೆ. 01 (DaijiworldNews/AK): ಪ್ರಸಿದ್ಧ ರ್ಯಾಪರ್ ಬಾದ್ಶಾ ಪತ್ನಿ ಇಶಾ ರಿಖಿಅವರೊಂದಿಗೆ ವಿಚ್ಛೇದನ ಪಡೆಯುತ್ತಿರುವುದಾಗಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಬಾದ್ಶಾ ಅವರು ತಮ್ಮ ಮೊದಲ ಮರಾಠಿ ಹಿಪ್-ಹಾಪ್ ಹಾಡು ‘ಚಿಮ್ನಾ ಬಿಡುಗಡೆ ಮಾಡಿದ್ದಾರೆ.

ಬಾದ್ಶಾ ಮತ್ತು ಇಶಾ ರಿಖಿ ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ, 2026ರ ಮಾರ್ಚ್ ತಿಂಗಳಲ್ಲಿ ಸರಳವಾಗಿ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೇವಲ ಐದೇ ತಿಂಗಳಿಗೆ ಇಬ್ಬರೂ ಪರಸ್ಪರ ಒಪ್ಪಂದದ ಮೂಲಕ ಬೇರ್ಪಡಲು ನಿರ್ಧರಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಜಂಟಿ ಹೇಳಿಕೆ ಹಂಚಿಕೊಂಡಿರುವ ಅವರು, ‘ನಾನು ಮತ್ತು ಇಶಾ ರಿಖಿ ಪರಸ್ಪರ ಸಮ್ಮತಿಯಿಂದ ಬೇರ್ಪಟ್ಟು, ನಮ್ಮದೇ ಆದ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದೇವೆ. ಗೌರವಪೂರ್ವಕವಾಗಿ ಈ ನಿರ್ಧಾರ ತಗೆದುಕೊಂಡಿದ್ದು, ಈ ಸಮಯದಲ್ಲಿ ಪ್ರತಿಯೊಬ್ಬರೂ ನಮ್ಮ ಖಾಸಗಿತನವನ್ನು ಗೌರವಿಸಬೇಕಾಗಿ ವಿನಂತಿಸುತ್ತೇವೆ. ನಮ್ಮ ಸಂಬಂಧದ ಬಗ್ಗೆ ಯಾವುದೇ ಊಹಾಪೋಹಗಳಿಗೆ ಆಸ್ಪದ ನೀಡದಂತೆ ಕೇಳಿಕೊಳ್ಳುತ್ತೇವೆ. ಈ ವಿಷಯದಲ್ಲಿ ಇದುವೇ ನಮ್ಮ ಕೊನೆಯ ಹೇಳಿಕೆ’ ಎಂದು ಸ್ಪಷ್ಟಪಡಿಸಿದ್ದಾರೆ.
ವೈಯಕ್ತಿಕ ಜೀವನದ ಸುದ್ದಿಯ ನಡುವೆಯೇ, ಬಾದ್ಶಾ ಅವರ ‘ಚಿಮ್ನಾ’ ಹಾಡು ಸಂಗೀತ ಪ್ರಿಯರ ಗಮನ ಸೆಳೆದಿದೆ. ಹಿಪ್-ಹಾಪ್ ಶೈಲಿ ಹಾಗೂ ಮಹಾರಾಷ್ಟ್ರದ ಜಾನಪದ ಸೊಗಡಿನ ಮಿಶ್ರಣವಾಗಿರುವ ಈ ಹಾಡಿಗೆ ದಿವ್ಯ ಕುಮಾರ್ ಮತ್ತು ಜಾನಪದ ಕಲಾವಿದ ನಾಗೇಶ್ ಮೋರ್ವೇಕರ್ ಧ್ವನಿಯಾಗಿದ್ದಾರೆ. ನಟಿ ನೇಹಾ ಖಾನ್ ಕೂಡ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಕೊಲ್ಹಾಪುರದಲ್ಲಿ ಚಿತ್ರಿತಗೊಂಡಿರುವ ಈ ಮ್ಯೂಸಿಕ್ ವಿಡಿಯೊದಲ್ಲಿ ಮಹಾರಾಷ್ಟ್ರದ ಮಣ್ಣಿನ ಸೊಗಡು, ಸಾಂಪ್ರದಾಯಿಕ ಕುಸ್ತಿ ಅಖಾಡ ಹಾಗೂ ಸ್ಥಳೀಯ ಜೀವನಶೈಲಿಯನ್ನು ನೈಜವಾಗಿ ತೋರಿಸಲಾಗಿದೆ.