ಬೆಂಗಳೂರು, ಆ. 26 (DaijiworldNews/AA): ಬಾಲಿವುಡ್ ನಟಿ ಕೃತಿ ಸನೋನ್ ಅಭಿನಯದ ರಕ್ಷಾಬಂಧನ ಹಬ್ಬದ ವಿಶೇಷ ಜಾಹೀರಾತಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪ್ರಸಿದ್ಧ ಆಭರಣ ಸಂಸ್ಥೆ ಜಿವಾ ಆ ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಹಿಂಪಡೆದಿದೆ.

ಸಾಕುಪ್ರಾಣಿಯೊಂದಿಗೆ ರಕ್ಷಾಬಂಧನ ಆಚರಿಸುವ ಪರಿಕಲ್ಪನೆಯನ್ನು ಹೊಂದಿದ್ದ ಈ ಜಾಹೀರಾತು ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಜಿವಾ ಸಂಸ್ಥೆ, "ನಾವು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳಿಗೆ ಅತ್ಯುನ್ನತ ಗೌರವ ಹಾಗೂ ಮನ್ನಣೆ ನೀಡುತ್ತೇವೆ. ಒಂದು ಬ್ರ್ಯಾಂಡ್ ಆಗಿ ಇಂತಹ ಸಂಭ್ರಮದ ಕ್ಷಣಗಳನ್ನು ಇಡೀ ಕುಟುಂಬದೊಂದಿಗೆ ಆಚರಿಸುವುದರಲ್ಲಿ ನಾವು ಸದಾ ನಂಬಿಕೆ ಇಟ್ಟಿದ್ದೇವೆ. ಈ ಬಾರಿ ಆ ಪ್ರೀತಿ ಮತ್ತು ಸಂಭ್ರಮವನ್ನು ನಮ್ಮ ಮುದ್ದಿನ ಸಾಕುಪ್ರಾಣಿಗಳಿಗೂ ವಿಸ್ತರಿಸುವುದು ನಮ್ಮ ಉದ್ದೇಶವಾಗಿತ್ತು" ಎಂದು ಮಾಹಿತಿ ನೀಡಿದೆ.
"ನಮ್ಮ ಇತ್ತೀಚಿನ ಜಾಹೀರಾತು ಸಮಾಜದ ಯಾವುದೇ ವರ್ಗದ ಜನರ ಭಾವನೆಗಳಿಗೆ ಅಜಾಗರೂಕತೆಯಿಂದ ನೋವುಂಟುಮಾಡಿದ್ದರೆ, ಅದು ನಮ್ಮ ಉದ್ದೇಶವಾಗಿರಲಿಲ್ಲ. ಜನರ ಭಾವನೆಗಳಿಗೆ ಗೌರವ ನೀಡಿ, ನಾವು ಈ ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಹಿಂಪಡೆದಿದ್ದೇವೆ" ಎಂದು ಸಂಸ್ಥೆ ತಿಳಿಸಿದೆ.