ಮುಂಬೈ, ಆ. 25 (DaijiworldNews/AK):ವೈರಲ್ ಕ್ವೀನ್ ಎಂದೇ ಖ್ಯಾತರಾಗಿರುವ ನಟಿ ಉರ್ಫಿ ಜಾವೇದ್ ಒಬ್ಬಂಟಿ ಆಗಿದ್ದಾರೆ. ಅವರು ಇದುವರೆಗೆ ಮದುವೆಯಾಗಿಲ್ಲ. ಮದುವೆ ಆಗುತ್ತೇನೆ ಅನ್ನೋ ಗ್ಯಾರಂಟಿನೂ ಇಲ್ಲ, ಆದರೆ ಭವಿಷ್ಯದಲ್ಲಿ ತಾಯಿಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ಉರ್ಫಿ ತಮ್ಮ ವೃತ್ತಿಜೀವನದ ಮೇಲೆ ಗಮನ ಹರಿಸುತ್ತಿದ್ದಾರೆ. ಇದರ ಜೊತೆಗೆ ಭವಿಷ್ಯದಲ್ಲಿ ತಾಯಿ ಆಗುವ ಆಸೆ ಹೊಂದಿರುವ ಉರ್ಫಿ ಅದಕ್ಕಾಗಿ ತಮ್ಮ ಮೊಟ್ಟೆಗಳನ್ನು (ಅಂಡಾಣುಗಳನ್ನು) ಫ್ರೀಜ್ ಮಾಡಿಸುವ ನಿರ್ಧಾರ ಕೈಗೊಂಡಿದ್ದಾರೆ.
ಈ ಕುರಿತು ಉರ್ಫಿ ತಮ್ಮ ಯೂಟ್ಯೂಬ್ ವ್ಲಾಗ್ನಲ್ಲಿ ಮಾತನಾಡಿದ್ದಾರೆ. ʻನಾನು ಸದ್ಯ ಮದುವೆಯಾಗುತ್ತಿಲ್ಲ. ಹಾಗಾಗಿ ನನ್ನ ಅಂಡಾಣುಗಳನ್ನ ಫ್ರೀಜ್ ಮಾಡಿಸಲು ನಿರ್ಧರಿಸಿದ್ದೇನೆ. 30 ವರ್ಷ ವಯಸ್ಸಿನ ನಂತರ ಅಂಡಾಣುಗಳ ಗುಣಮಟ್ಟ ವೇಗವಾಗಿ ಕುಸಿಯುತ್ತದೆ ಎಂದು ನಾನು ಓದಿದ್ದೇನೆ. ನಾನು ಇತ್ತೀಚೆಗಷ್ಟೇ 30 ವರ್ಷಕ್ಕೆ ಕಾಲಿಟ್ಟಿದ್ದೇನೆ. ಈಗ ಅಂಡಾಣುಗಳನ್ನ ಫ್ರೀಜ್ ಮಾಡದೇ ಇದ್ದರೇ ಮತ್ತೆ ಎಂದಿಗೂ ಸಾಧ್ಯವಾಗದಿರಬಹುದು ಅನ್ನಿಸಿತು ಎಂದಿದ್ದಾರೆ.
ಮುಂದುವರಿದು, ʻನನ್ನ ಮದುವೆ ಯಾವಾಗ ಆಗುತ್ತದೆ? ನಾನು ಯಾವಾಗ ಮಕ್ಕಳನ್ನು ಹೊಂದಲು ನಿರ್ಧರಿಸುತ್ತೇನೆ? ಅಂತ ಯೋಚಿಸಿಕೊಂಡೇ ಕೂತಿರೋಕೆ ಆಗಲ್ಲ. ಆ ಸಮಯದಲ್ಲಿ ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳೂ ಎದುರಾಗಬಹುದು. ಆದ್ದರಿಂದ ಅಂಡಾಣುಗಳನ್ನ ಫ್ರೀಜ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇನೆಂದು ತಿಳಿಸಿದ್ದಾರೆ.
ನನ್ನ ವೃತ್ತಿಜೀವನ ಈಗಷ್ಟೇ ಆರಂಭವಾಗಿದೆ ಎಂದು ನಾನು ಭಾವಿಸುತ್ತೇನೆ. ಇನ್ನೂ ಸಾಕಷ್ಟು ಸಾಧಿಸಬೇಕು. ಸದ್ಯ ನನ್ನ ಸಂಪೂರ್ಣ ಸಮಯ ಮತ್ತು ಶಕ್ತಿ ನನ್ನ ವೃತ್ತಿಜೀವನದ ಮೇಲೆಯೇ ಕೇಂದ್ರೀಕೃತವಾಗಿದೆ. ಆದರೆ ಬಯಾಲಾಜಿಕಲ್ ಕ್ಲಾಕ್ ಯಾವಾಗಲೂ ನನ್ನ ಮನಸ್ಸಿನಲ್ಲಿ ಓಡುತ್ತಿರುತ್ತದೆ. ಅಂಡಾಣುಗಳನ್ನ ಫ್ರೀಜ್ ಮಾಡಿಸಿಕೊಂಡರೆ ನನಗೆ ನೆಮ್ಮದಿ ಸಿಗುತ್ತದೆ. ನನ್ನ ಹೆಗಲ ಮೇಲಿದ್ದ ದೊಡ್ಡ ಭಾರವೊಂದು ಇಳಿದಂತಾಗುತ್ತದೆ ಎಂದು ಉರ್ಫಿ ಹೇಳಿದ್ದಾರೆ
ಭವಿಷ್ಯದಲ್ಲಿ ತಾಯಿಯಾಗುವ ಆಸೆ ಹೊಂದಿರುವುದಾಗಿ ಸ್ಪಷ್ಟಪಡಿಸಿದ ನಟಿ, ʻಈಗ ನಾನು ಕಾಲದೊಂದಿಗೆ ಓಡುತ್ತಿಲ್ಲ. ಈಗ ನಾನು ನೆಮ್ಮದಿಯಿಂದ ನನ್ನ ವೃತ್ತಿಜೀವನದ ಮೇಲೆ ಗಮನ ಹರಿಸಬಹುದು. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಗತ್ಯವೂ ಇಲ್ಲ ಎಂದು ಉರ್ಫಿ ಹೇಳಿದ್ದಾರೆ.