ಬೆಂಗಳೂರು, ಆ. 24 (DaijiworldNews/AA): ಝೀ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’ ಗ್ರ್ಯಾಂಡ್ ಫಿನಾಲೆಯಲ್ಲಿ ಮಂಗಳೂರಿನ ಇಬ್ಬರು ಪುಟಾಣಿ ಪ್ರತಿಭೆಗಳು ಮೊದಲ ಎರಡು ಸ್ಥಾನಗಳನ್ನು ಪಡೆದು ಕರಾವಳಿಗೆ ಹೆಮ್ಮೆ ತಂದಿದ್ದಾರೆ.

ಮಂಗಳೂರಿನ ಅಶ್ಮಿತ್ ಈ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ವಿಜೇತ ಟ್ರೋಫಿ ಜೊತೆಗೆ ಬರೋಬ್ಬರಿ 20 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ. ಗಾಯಕಿ ಇಂದು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಅಶ್ಮಿತ್ ತರಬೇತಿ ಪಡೆದಿದ್ದರು.
ಸ್ಪರ್ಧೆಯುದ್ದಕ್ಕೂ ತಮ್ಮ ಗಾಯನದ ಮೂಲಕ ಗಮನ ಸೆಳೆದ ಅಶ್ಮಿತ್, ವಯಲಿನ್ ವಾದನದಲ್ಲೂ ಗಮನಾರ್ಹ ಪ್ರತಿಭೆ ಪ್ರದರ್ಶಿಸಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಗ್ರ್ಯಾಂಡ್ ಫಿನಾಲೆಯಲ್ಲಿ ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಅಶ್ಮಿತ್ ಚಾಂಪಿಯನ್ ಪಟ್ಟಕ್ಕೇರಿದರು.
ಮಂಗಳೂರಿನ ಮತ್ತೊಬ್ಬ ಪ್ರತಿಭಾವಂತ ಬಾಲಕ ಅಚಿಂತ್ಯ ರೈ ಕೂಡ ಅಶ್ಮಿತ್ಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಮೊದಲ ರನ್ನರ್ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಅಚಿಂತ್ಯ ಅವರ ಉತ್ತಮ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಅವರಿಗೆ ಟ್ರೋಫಿ ಹಾಗೂ 15 ಲಕ್ಷ ರೂ. ನಗದು ಬಹುಮಾನ ಲಭಿಸಿದೆ.
ಹುಬ್ಬಳ್ಳಿಯ ಮಹನ್ಯಾ ಪಾಟೀಲ್ ಎರಡನೇ ರನ್ನರ್ಅಪ್ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ.
ಅಶ್ಮಿತ್ ಚಾಂಪಿಯನ್ ಹಾಗೂ ಅಚಿಂತ್ಯ ರೈ ಮೊದಲ ರನ್ನರ್ಅಪ್ ಆಗುವುದರೊಂದಿಗೆ ಈ ಬಾರಿಯ ‘ಸರಿಗಮಪ ಲಿಟಲ್ ಚಾಂಪ್ಸ್’ ಫಿನಾಲೆಯಲ್ಲಿ ಮಂಗಳೂರಿಗೆ ನಿಜಕ್ಕೂ ‘ಡಬಲ್ ಧಮಾಕಾ’ ಸಿಕ್ಕಂತಾಗಿದೆ.
ಗ್ರ್ಯಾಂಡ್ ಫಿನಾಲೆ ಎರಡು ಹಂತಗಳಲ್ಲಿ ನಡೆದಿದ್ದು, ಒಟ್ಟು ಆರು ಯುವ ಪ್ರತಿಭೆಗಳು ಅಂತಿಮ ಸುತ್ತಿಗೆ ಅರ್ಹತೆ ಪಡೆದಿದ್ದರು. ಸ್ಪರ್ಧೆಯ ವಿವಿಧ ಹಂತಗಳಲ್ಲಿ ತಮ್ಮ ವಿಶಿಷ್ಟ ಪ್ರತಿಭೆ, ಗಾಯನ ಕೌಶಲ್ಯ ಹಾಗೂ ಅದ್ಭುತ ಪ್ರದರ್ಶನಗಳ ಮೂಲಕ ಈ ಆರು ಮಂದಿ ಫಿನಾಲೆ ತಲುಪಿದ್ದರು.
ಅಂತಿಮ ಸುತ್ತಿನಲ್ಲಿ ಆರು ಮಂದಿ ಸ್ಪರ್ಧಿಗಳು ಪರಸ್ಪರ ಪೈಪೋಟಿ ನಡೆಸಿ ತಮ್ಮ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಿದರು. ತೀವ್ರ ಪೈಪೋಟಿಯ ನಡುವೆಯೂ ಅಶ್ಮಿತ್ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಮುನ್ನಡೆ ಸಾಧಿಸಿ ಪ್ರತಿಷ್ಠಿತ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ಅಚಿಂತ್ಯ ರೈ ಮೊದಲ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.
2022ರಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದ ‘ದಾಯ್ಜಿವರ್ಲ್ಡ್ ಜೂನಿಯರ್ ಸೆಲೆಬ್ರಿಟಿ’ ಕಾರ್ಯಕ್ರಮದಲ್ಲೂ ಅಶ್ಮಿತ್ ಫೈನಲಿಸ್ಟ್ ಆಗಿದ್ದರು ಎಂಬುದು ಗಮನಾರ್ಹ. ‘ಸರಿಗಮಪ ಲಿಟಲ್ ಚಾಂಪ್ಸ್’ನ ಮೊದಲ ಎರಡು ಸ್ಥಾನಗಳನ್ನು ಮಂಗಳೂರಿನ ಇಬ್ಬರು ಪುಟಾಣಿ ಗಾಯಕರು ಅಲಂಕರಿಸಿರುವುದು ಕರಾವಳಿ ಭಾಗದ ಸಂಗೀತಾಸಕ್ತರಿಗೆ ಹೆಮ್ಮೆಯ ಕ್ಷಣವಾಗಿದೆ.