ಬೆಂಗಳೂರು, ಆ. 22 (DaijiworldNews/AA): ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಸಿನಿಮಾ ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವುದಾಗಿ ದೂರು ದಾಖಲಾಗಿದೆ.

ಭಾಸ್ಕರ್ ಶೆಟ್ಟಿ ಎಂಬುವವರು ಓಂ ಪ್ರಕಾಶ್ ರಾವ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. 'ಫಿನಿಕ್ಸ್' ಎಂಬ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಓಂ ಪ್ರಕಾಶ್ ರಾವ್ ಅವರು ತನ್ನಿಂದ ಒಟ್ಟು 3 ಕೋಟಿ 85 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದರು. ಸೆಪ್ಟೆಂಬರ್ 23ರಂದು ಈ ಹಣಕಾಸಿನ ವ್ಯವಹಾರ ನಡೆದಿದ್ದು, ಕೇವಲ ಆರು ತಿಂಗಳೊಳಗೆ ಸಂಪೂರ್ಣ ಹಣವನ್ನು ಹಿಂದಿರುಗಿಸುವುದಾಗಿ ಓಂ ಪ್ರಕಾಶ್ ಭರವಸೆ ನೀಡಿದ್ದರು. ಆದರೆ, ವ್ಯವಹಾರ ನಡೆದು ಮೂರು ವರ್ಷ ಕಳೆದರೂ ಹಣ ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಣ ವಾಪಸ್ ಕೇಳಿದಾಗಲೆಲ್ಲಾ ನಿರ್ದೇಶಕರು ವಿವಿಧ ಕಾರಣಗಳನ್ನು ನೀಡಿ ಕಾಲಹರಣ ಮಾಡುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ಅವರು ಸಂಪರ್ಕಕ್ಕೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ನನಗೆ ಸೇರಿದ ಹಣವನ್ನು ಕೇಳಲು ಓಂ ಪ್ರಕಾಶ್ ಅವರ ಮನೆಗೆ ತೆರಳಿದ್ದಾಗ, ಅಲ್ಲಿ ಬೆದರಿಕೆ ಹಾಕಲಾಗಿದೆ. ಜೊತೆಗೆ ದೂರುದಾರರ ಮೇಲೆಯೇ ಗಲಾಟೆ ಮಾಡಿದ ಆರೋಪ ಹೊರಿಸಿ ಅವರನ್ನು ಭಯಭೀತರನ್ನಾಗಿಸುವ ಪ್ರಯತ್ನ ನಡೆದಿದೆ ಎಂದು ದೂರುದಾರು ಆರೋಪ ಮಾಡಿದ್ದಾರೆ.