ಬೆಂಗಳೂರು, ಜು. 18 (DaijiworldNews/TA): 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಘೋಷಿಸಲಾಗಿದ್ದು, ಈ ಬಾರಿಯೂ ದಕ್ಷಿಣ ಭಾರತದ ಸಿನಿಮಾಗಳು ಹಲವು ಪ್ರಮುಖ ವಿಭಾಗಗಳಲ್ಲಿ ಮೇಲುಗೈ ಸಾಧಿಸಿವೆ. ಕನ್ನಡ ಚಿತ್ರರಂಗಕ್ಕೂ ಸಂತಸದ ಸುದ್ದಿ ಸಿಕ್ಕಿದ್ದು, ‘ಮಿಥ್ಯ’ ಸಿನಿಮಾ ಬರೋಬ್ಬರಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

‘ಮಿಥ್ಯ’ಗೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು: ರಕ್ಷಿತ್ ಶೆಟ್ಟಿ ಹಾಗೂ ಕೆಆರ್ಜಿ ಸ್ಟುಡಿಯೋಸ್ ನಿರ್ಮಿಸಿರುವ ‘ಮಿಥ್ಯ’ ಚಿತ್ರಕ್ಕೆ ಮೂರು ಪ್ರಮುಖ ಪ್ರಶಸ್ತಿಗಳು ಲಭಿಸಿವೆ.
ಅತ್ಯುತ್ತಮ ಬಾಲನಟ ಪ್ರಶಸ್ತಿ – ಆತಿಶ್ ಶೆಟ್ಟಿ
ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ – ರೂಪಶ್ರೀ ವರ್ಕಾಡಿ
ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಪ್ರಶಸ್ತಿ – ‘ಮಿಥ್ಯ’
ಮುಖ್ಯ ಪ್ರಶಸ್ತಿ ವಿಭಾಗದಲ್ಲಿ ಮಿಥ್ಯ ಸಿನಿಮಾದ ಬಾಲನಟ ಆತಿಶ್ ಶೆಟ್ಟಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಲಭಿಸಿದೆ. ಅವರು ಈ ಪ್ರಶಸ್ತಿಯನ್ನು ಬೆಂಗಾಲಿಯ ಬಾಲನಟರೊಂದಿಗೆ ಹಂಚಿಕೊಂಡಿದ್ದಾರೆ. ಅದೇ ಸಿನಿಮಾನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ರೂಪಾಶ್ರೀ ವರ್ಕಾಡಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಅವರು ಸಹ ತಮಿಳಿನ ‘ಮಹಾರಾಜ’ ಸಿನಿಮಾದ ನಟಿ ಸಚನಾ ಅವರೊಟ್ಟಿಗೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಮಿಥ್ಯ ಸಿನಿಮಾಕ್ಕೆ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ, ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಸಹ ಲಭ್ಯವಾಗಿದೆ.
ಮಿಥ್ಯ ಸಿನಿಮಾವನ್ನು ಸುಮಂತ್ ಭಟ್ ನಿರ್ದೇಶನ ಮಾಡಿದ್ದಾರೆ. ಪೋಷಕರನ್ನು ಕಳೆದುಕೊಂಡ ಬಾಲಕನೊಬ್ಬ ಮುಂಬೈನಿಂದ ಉಡುಪಿಗೆ ಬಂದು ತನ್ನ ಚಿಕ್ಕಪ್ಪ-ಚಿಕ್ಕಮ್ಮನ ಕುಟುಂಬದೊಂದಿಗೆ ಬದುಕಬೇಕಾಗುವ ಸಂದರ್ಭ, ಅವನ ಮನಸ್ಥಿತಿ, ಏಕಾಂಗಿತನ ಮತ್ತು ಭಾವನಾತ್ಮಕ ಹೋರಾಟವನ್ನು ಚಿತ್ರವು ಮನಮುಟ್ಟುವ ರೀತಿಯಲ್ಲಿ ತೆರೆಗೆ ತಂದಿದೆ. ‘ಮಿಥ್ಯ’ ಸಿನಿಮಾ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿದೆ. ಪ್ರಸ್ತುತ ಈ ಚಿತ್ರ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿಗಳಲ್ಲೂ ದಕ್ಷಿಣ ಭಾರತದ ಸಿನಿಮಾಗಳು ಮೇಲುಗೈ ಸಾಧಿಸಿವೆ. ಮಮ್ಮುಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಅತ್ಯುತ್ತಮ ಜನಪ್ರಿಯ (ಮನರಂಜನಾ) ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.