ಬೆಂಗಳೂರು, ಜು.16 (DaijiworldNews/AK): ಶ್ರೀಲೀಲಾ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗುವ ಹಾದಿಯಲ್ಲಿದ್ದಾರೆ. ಈಗಾಗಲೇ ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಶ್ರೀಲೀಲಾ, ತೆಲುಗಿನ ಸ್ಟಾರ್ ನಟರುಗಳೊಟ್ಟಿಗೆ ನಟಿಸಿ, ಚಿತ್ರರಂಗದ ನಂಬರ್ 1 ನಟಿ ಎನಿಸಿಕೊಂಡಿದ್ದರು.

ಅದಾದ ಬಳಿಕ ತಮಿಳಿಗೂ ಎಂಟ್ರಿ ಕೊಟ್ಟು, ಅಲ್ಲಿಯೂ ಈಗ ಸತತ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಬಾಲಿವುಡ್ನಲ್ಲೂ ಸಹ ಶ್ರೀಲೀಲಾ ಬ್ಯುಸಿ, ಆದರೆ ಕೆಲ ಒಳ್ಳೆಯ ಅವಕಾಶಗಳನ್ನು ಶ್ರೀಲೀಲಾ ಕಳೆದುಕೊಳ್ಳುತ್ತಿದ್ದಾರೆ ಸಹ. ಈ ಹಿಂದೆ ಎರಡು ಒಳ್ಳೆ ತೆಲುಗು ಸಿನಿಮಾ ಅವಕಾಶ ಕಳೆದುಕೊಂಡಿದ್ದ ನಟಿ ಶ್ರೀಲೀಲಾ, ಈಗ ತಮಿಳಿನ ಸ್ಟಾರ್ ನಟನೊಟ್ಟಿಗೆ ನಟಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಈ ಹಿಂದೆ ಶ್ರೀಲೀಲಾ, ವಿಜಯ್ ದೆವರಕೊಂಡ ಜೊತೆಗೆ ಶ್ರೀಲೀಲಾ ಸಿನಿಮಾ ಒಪ್ಪಿಕೊಂಡಿದ್ದರು. ಸಿನಿಮಾಕ್ಕೆ ಆಗ ವಿಡಿ 12 ಎಂದು ಕರೆಯಲಾಗಿತ್ತು. ಫೋಟೊಶೂಟ್ ಸಹ ಆಗಿತ್ತು. ಆದರೆ ಬಳಿಕ ಆ ಸಿನಿಮಾ ಅವಕಾಶ ಭಾಗ್ಯಶ್ರೀ ಭೋರ್ಸೆ ಪಾಲಾಯ್ತು. ‘ಕಿಂಗ್ಡಮ್’ ಹೆಸರಿನ ಆ ಸಿನಿಮಾ ಬಿಡುಗಡೆ ಆಗಿ, ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ಬಳಿಕ, ಶ್ರೀಲೀಲಾ, ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ನಟನೆಯ ‘ಲೆನಿನ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆದರು. ಆದರೆ ಆ ಸಿನಿಮಾದಿಂದಲೂ ಹೊರಬಂದರು ನಟಿ. ಆ ಸಿನಿಮಾ ಸಹ ಭಾಗ್ಯಶ್ರೀ ಭೋರ್ಸೆ ಅವರ ಕೈಸೇರಿತು. ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ, ಬ್ಲಾಕ್ ಬಸ್ಟರ್ ಆಗಿದೆ.
ಇನ್ನು ಈಗ ತಮಿಳಿನ ಸೂಪರ್ ಸ್ಟಾರ್ ನಟರೊಬ್ಬರ ಜೊತೆಗೆ ನಟಿಸುವ ಅವಕಾಶವನ್ನು ಶ್ರೀಲೀಲಾ ಕಳೆದುಕೊಂಡಿದ್ದಾರೆ. ಶ್ರೀಲೀಲಾ ಅವರು, ತಮಿಳಿನ ಸ್ಟಾರ್ ನಟ ಅಜಿತ್ ಅವರ ನಟನೆಯ ಹೊಸ ಸಿನಿಮಾನಲ್ಲಿ ನಟಿಸಲಿದ್ದರು. ಸಿನಿಮಾದ ಕುರಿತು ಮಾತುಕತೆ ಸಹ ನಡೆದಿತ್ತು. ಆದರೆ ಇದೀಗ ಹಠಾತ್ತನೆ ಅಜಿತ್ ಅವರ ಸಿನಿಮಾಕ್ಕೆ ನಾಯಕಿ ಬದಲಾವಣೆ ಆಗಿದೆ. ಅಜಿತ್ ಅವರ ಸಿನಿಮಾದಿಂದ ಶ್ರೀಲೀಲಾ ಹೊರನಡೆದಿದ್ದು, ಅವರ ಜಾಗವನ್ನು ಖಯಾದು ಲೋಹರ್ ತುಂಬಲಿದ್ದಾರೆ.