ಮುಂಬೈ, ಜು. 12 (DaijiworldNews/AA): ಬಾಲಿವುಡ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಮತ್ತು ಟಬು ಬಳಿಕ ಇದೀಗ ನಟಿ ದಿಶಾ ಪಟಾನಿ ಹಾಲಿವುಡ್ ಗೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.

ದಿಶಾ ಪಟಾನಿ, ಆಸ್ಕರ್ ಪ್ರಶಸ್ತಿ ವಿಜೇತ ನಟ ಕೆವಿನ್ ಸ್ಪೇಸಿ ನಿರ್ದೇಶನದ 'Hooligards Saga: The Portal of Force' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ದಿಶಾ, "ಕೆವಿನ್ ಸ್ಪೇಸಿ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಕೆವಿನ್ ಸ್ಪೇಸಿ ಅದ್ಭುತ ನಿರ್ದೇಶಕ. ಅವರು ನಟರಿಗೆ ಸಾಕಷ್ಟು ಸ್ವಾತಂತ್ರ್ಯ ಕೊಡುತ್ತಾರೆ. ಪ್ರತಿಯೊಂದು ಸೀನ್ಗೂ ನಮ್ಮ ಭಾವನೆಗಳನ್ನು ಹೇಗೆ ತೋರಿಸಬೇಕು ಎಂದು ಚರ್ಚೆ ಮಾಡುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ್ದು ನನಗೆ ಹೊಸ ಅನುಭವ" ಎಂದಿದ್ದಾರೆ.
"ಹಾಲಿವುಡ್ನಲ್ಲಿ ಅವಕಾಶ ಪಡೆಯುವುದು ಸುಲಭವಲ್ಲ. ಭಾರತದಲ್ಲೇ ಕುಳಿತು ಹಾಲಿವುಡ್ನಲ್ಲಿ ಪಾತ್ರ ಸಿಗುತ್ತದೆ ಎಂದು ನಿರೀಕ್ಷೆ ಮಾಡಬಾರದು. ಆಡಿಷನ್, ಏಜೆನ್ಸಿ, ವೀಸಾ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ದಾಟಬೇಕು. ಅಲ್ಲಿಗೆ ಹೋಗಿ, ಅಲ್ಲೇ ಇದ್ದು ಪ್ರಯತ್ನ ಮಾಡಿದರೆ ಮಾತ್ರ ಅವಕಾಶಗಳು ಹೆಚ್ಚಾಗುತ್ತವೆ. ಇನ್ನು ಹಾಲಿವುಡ್ನಲ್ಲಿ ಆಡಿಷನ್ ಪ್ರಕ್ರಿಯೆ ತುಂಬಾ ವೃತ್ತಿಪರವಾಗಿರುತ್ತದೆ. ಕೆಲವೊಮ್ಮೆ ನಿಮ್ಮ ಹಿಂದಿನ ಕೆಲಸ ನೋಡಿ ಅವಕಾಶ ಸಿಗಬಹುದು. ಆದರೆ, ಹೆಚ್ಚಿನ ಪಾತ್ರಗಳಿಗೆ ಆಡಿಷನ್ ಕಡ್ಡಾಯವಾಗಿರುತ್ತದೆ" ಎಂದು ತಿಳಿಸಿದ್ದಾರೆ.