ಬೆಂಗಳೂರು, ಜು. 08 (DaijiworldNews/AK): ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ಹಾಟೆಸ್ಟ್ ಅವತಾರ ಅನಾವರಣಗೊಂಡಿದೆ. ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡಿನಲ್ಲಿ ಇಬ್ಬರೂ ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋದ ನೋಡಿದ ಎಲ್ಲರೂ ಕಿಯಾರಾ ಅವರ ಗ್ಲಾಮರ್, ಯಶ್ ಅವರ ಕಟ್ಟುಮಸ್ತಾದ ದೇಹ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಅದರ ಭಾಗವಾಗಿ ಸಿನಿಮಾ ಪ್ರಚಾರ ಆರಂಭಿಸಿದೆ. ಈ ಮೊದಲು ಟೀಸರ್ಗಳ ಮೂಲಕ ಸೆಳೆದಿದ್ದ ಈ ಚಿತ್ರ ತಂಡ ಈಗ ‘ತಬಾಹಿ’ ವಿಡಿಯೋ ಸಾಂಗ್ ಅನಾವರಣ ಮಾಡಿದೆ.
ಯಶ್ ಹಾಗೂ ಕಿಯಾರಾ ‘ಟಾಕ್ಸಿಕ್’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ‘ತಬಾಹಿ’ ಹಾಡಿನ ಉದ್ದಕ್ಕೂ ಯಶ್ ಹಾಗೂ ಕಿಯಾರಾ ರೊಮ್ಯಾನ್ಸ್ ಮಾಡುತ್ತಾರೆ. ಯಶ್ ಅವರು ರಾಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಿಯಾರಾ ಅವರು ರುಮಿ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ದೃಶ್ಯದಲ್ಲಿ ನಯನತಾರಾ ಕೂಡ ಕಾಣಿಸುತ್ತಾರೆ. ಈ ಹಾಡಿಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಮೊದಲು ಲಿರಿಕಲ್ ವಿಡಿಯೋ ಮಾತ್ರ ರಿಲೀಸ್ ಆಗಿತ್ತು.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಪ್ಯಾನ್ ವರ್ಡ್ ಸಿನಿಮಾ ಇದೇ ಆಗಸ್ಟ್ 26ರಂದು ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗುತ್ತಿದೆ. ಚಿತ್ರದಲ್ಲಿ ಯಶ್ ಅವರಿಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಇವರೊಂದಿಗೆ ನಯನತಾರಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ದಕ್ಷಿಣ ಹಾಗೂ ಬಾಲಿವುಡ್ನ ದಂಡೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಒಟ್ಟಿಗೆ ಶೂಟ್ ಆಗಿರುವ ಈ ಸಿನಿಮಾ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗುತ್ತಿದ್ದು, ಸದ್ಯ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.