ಮುಂಬೈ, ಜು. 05 (DaijiworldNews/AA): ಹೀರೋ ಮತ್ತು ಹೀರೋಯಿನ್ ನಡುವೆ ಬಹಳ ತಾರತಮ್ಯ ಮಾಡಲಾಗುತ್ತದೆ. ಸೆಟ್ಗಳಲ್ಲಿನ ಈ ತಾರತಮ್ಯಗಳು ಸಂಪೂರ್ಣವಾಗಿ ತೊಲಗಬೇಕಿದೆ ಎಂದು ಚಿತ್ರರಂಗದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರ ನಡುವೆ ನಡೆಯುವ ಲಿಂಗ ತಾರತಮ್ಯದ ಕುರಿತು ಬಾಲಿವುಡ್ ನಟಿ ಕೃತಿ ಸನನ್ ತಿಳಿಸಿದ್ದಾರೆ.

ಟಾಕ್ ಶೋನಲ್ಲಿ ಭಾಗವಹಿಸಿದ್ದ ವೇಳೆ ಈ ವಿಚಾರವಾಗಿ ಮಾತನಾಡಿದ ಅವರು, "ಚಿತ್ರೀಕರಣದ ಸಮಯದಲ್ಲಿ ಪುರುಷ ಮತ್ತು ಮಹಿಳಾ ಕಲಾವಿದರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ತಮಗೆ ಚಿತ್ರಕಥೆ ಹಾಗೂ ಪಾತ್ರಗಳ ಬಗ್ಗೆ ನಿರ್ದೇಶಕರನ್ನು ಪ್ರಶ್ನಿಸುವ ಅಭ್ಯಾಸ ಮೊದಲಿನಿಂದಲೂ ಇದೆ. ಒಬ್ಬ ನಟಿ ಪ್ರಶ್ನೆ ಕೇಳಿದರೆ ಸೆಟ್ನಲ್ಲಿರುವವರು 'ಇವಳು ಎಷ್ಟು ಪ್ರಶ್ನೆ ಕೇಳುತ್ತಾಳೆ, ಇನ್ನು ಇವಳ ೫೦ ಪ್ರಶ್ನೆಗಳು ಶುರುವಾಗುತ್ತವೆ' ಎಂದು ಆಡಿಕೊಳ್ಳುತ್ತಾರೆ. ಇದೇ ಪ್ರಶ್ನೆಯನ್ನು ಒಬ್ಬ ನಟ ಕೇಳಿದರೆ, ಅವನು ಸಿನಿಮಾದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾನೆ ಎಂದು ಹೊಗಳುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ನನಗೂ ಇಂತಹ ಅನುಭವವಾಗಿದೆ. ನಾನು ಪ್ರಶ್ನೆ ಕೇಳಿದಾಗ 'ಹೆಚ್ಚು ತಲೆ ಕೆಡಿಸಿಕೊಳ್ಳಬೇಡ, ಸುಮ್ಮನೆ ನಟಿಸು' ಎಂದು ಹೇಳುತ್ತಿದ್ದರು. ಆದರೆ ಅದೇ ಪ್ರಶ್ನೆಯನ್ನು ಸಹನಟ ಕೇಳಿದಾಗ 'ಓಕೆ, ಹಾಗೇ ಮಾಡೋಣ' ಎಂದು ಒಪ್ಪಿಕೊಳ್ಳುತ್ತಿದ್ದರು. ಚಿತ್ರೀಕರಣದ ವೇಳೆ ಸಿಗುವ ಸೌಲಭ್ಯಗಳಲ್ಲೂ ನಟ-ನಟಿಯರ ನಡುವೆ ವ್ಯತ್ಯಾಸ ಇರುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
"ಹಲವು ಬಾರಿ ನಟರಿಗೆ ನೀಡಲಾಗುವ ಕಾರು ಅಥವಾ ಕ್ಯಾರವಾನ್ ರೂಮ್ಗಳು ತುಂಬಾ ಐಷಾರಾಮಿಯಾಗಿರುತ್ತವೆ. ಆದರೆ ನಟಿಯರಿಗೆ ಸಾಮಾನ್ಯವಾದ ರೂಮ್ ನೀಡಲಾಗುತ್ತದೆ. ನನಗೆ ಸಣ್ಣ ರೂಮ್ ಅಥವಾ ಸಣ್ಣ ಕಾರು ಕೊಟ್ಟರೂ ಪರವಾಗಿಲ್ಲ, ಆದರೆ ಆ ಮೂಲಕ ನಾನು ಅವರಿಗಿಂತ ಕಮ್ಮಿ ಎನ್ನುವಂತೆ ನನ್ನನ್ನು ಭಾವಿಸಬೇಡಿ ಎನ್ನುವುದಷ್ಟೇ ನನ್ನ ವಾದ" ಎಂದಿದ್ದಾರೆ.
"ಶೂಟಿಂಗ್ ಸೆಟ್ಗೆ ಬರುವಂತೆ ಸಹಾಯಕ ನಿರ್ದೇಶಕರು ಮೊದಲು ಹುಡುಗಿಯರನ್ನೇ ಕರೆಯುತ್ತಾರೆ. ಅವರಿಗೆ ಪುರುಷ ನಟರನ್ನು ಕಂಡರೆ ಕೊಂಚ ಭಯವಿರುತ್ತದೆ. ಹೀಗಾಗಿ ಮಹಿಳಾ ನಟಿಯರನ್ನು ಅವರು ತುಂಬಾ ಸಲೀಲಾಗಿ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.