ಬೆಂಗಳೂರು, ಜು. 04 (DaijiworldNews/AK): ಕನ್ನಡದ ‘ವಜ್ರಕಾಯ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ನಂತರ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಬ್ಲಾಕ್ಬಸ್ಟರ್ ಯಶಸ್ಸಿನೊಂದಿಗೆ ಸೌತ್ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ನಟಿ ನಭಾ ನಟೇಶ್ ಮಿಂಚಿದರು.

ಸಿನಿಮಾ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಇದ್ದಕ್ಕಿದ್ದಂತೆ ಬೆಳ್ಳಿತೆರೆಯಿಂದ ಮರೆಯಾದರು. ಅಂದಹಾಗ ಅವರು ಚಿತ್ರರಂಗದಿಂದ ಎರಡು ವರ್ಷಗಳ ಕಾಲ ಸುದೀರ್ಘ ವಿರಾಮ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ನಭಾ ಇತ್ತೀಚಿನ ಸಂದರ್ಶನವೊಂದರಲ್ಲಿ ಅತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ.
ತಮ್ಮ ವೃತ್ತಿಜೀವನದ ದೀರ್ಘ ವಿರಾಮದ ಬಗ್ಗೆ ಮಾತನಾಡಿದ ನಭಾ ನಟೇಶ್, ‘ನಾನು ಮೆಟ್ಟಿಲುಗಳಿಂದ ಜಾರಿಬಿದ್ದೆ. ಆ ಸಮಯದಲ್ಲಿ ತಲೆಗೆ ಪೆಟ್ಟಾಗಬಾರದು ಎಂದು ತಪ್ಪಿಸಿಕೊಳ್ಳಲು ಹೋದಾಗ, ನನ್ನ ಇಡೀ ದೇಹದ ತೂಕ ಎಡ ಭುಜದ ಮೇಲೆ ಬಿದ್ದಿತು. ಪರಿಣಾಮ ಭುಜದ ಒಳಗಿನ ಮೂಳೆಗಳು ಸಣ್ಣ ಸಣ್ಣ ತುಂಡುಗಳಾಗಿ ಒಡೆದು ಹೋಗಿದ್ದವು. ಕೇವಲ ಮುರಿತ ಅಂದುಕೊಂಡಿದ್ದ ನನಗೆ ದೊಡ್ಡ ಶಸ್ತ್ರಚಿಕಿತ್ಸೆಯನ್ನೇ ಮಾಡಬೇಕಾಯಿತು. ಭುಜದ ಮೂಳೆಯನ್ನು ಜೋಡಿಸಲು ಸ್ಟೀಲ್ ರಾಡ್ ಮತ್ತು ಹಲವು ಸ್ಕ್ರೂಗಳನ್ನು ಅಳವಡಿಸಲಾಯಿತು’ ಎಂದು ಆ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಈ ಘಟನೆ ಸಂಭವಿಸಿದಾಗ ನಭಾ ಅವರು ಕೈಯಲ್ಲಿ ಸರಣಿ ಚಿತ್ರಗಳನ್ನು ಹೊಂದಿದ್ದರು. ಒಮ್ಮೆಗೆ ಎದುರಾದ ಈ ಅಪಘಾತ ಅವರ ಮೇಲೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಭಾರಿ ಪರಿಣಾಮ ಬೀರಿತು. ಸದಾ ಶೂಟಿಂಗ್, ಲೈಟ್ಸ್, ಕ್ಯಾಮೆರಾ ಅಂತ ಬ್ಯುಸಿಯಾಗಿದ್ದ ನಟಿ, ಗಾಯದ ಕಾರಣದಿಂದಾಗಿ ಸಂಪೂರ್ಣ ಬೆಡ್ ರೆಸ್ಟ್ ಮತ್ತು ಫಿಸಿಯೋಥೆರಪಿಗೆ ಸೀಮಿತವಾಗಬೇಕಾಯಿತು. ಈ ಹಠಾತ್ ಬದಲಾವಣೆ ಮತ್ತು ನಿರ್ಬಂಧಗಳು ಅವರಲ್ಲಿ ತೀವ್ರ ಮಾನಸಿಕ ಒತ್ತಡವನ್ನು ಉಂಟುಮಾಡಿದ್ದವು.
ನಭಾ ಈ ಕಷ್ಟದ ಸಮಯವನ್ನು ಧನಾತ್ಮಕವಾಗಿ ಬಳಸಿಕೊಂಡರು. ಹಾಸಿಗೆ ಹಿಡಿದಿದ್ದ ಆ ದಿನಗಳಲ್ಲಿ ಅವರು ತಮ್ಮನ್ನು ತಾವು ಮಾನಸಿಕವಾಗಿ ಪುನರ್ನಿರ್ಮಿಸಿಕೊಳ್ಳಲು ನಿರ್ಧರಿಸಿದರು. ಆ ವಿರಾಮದ ಸಮಯದಲ್ಲಿ ಚಿತ್ರಕಲೆ, ನೃತ್ಯ, ಸಂಗೀತ, ಶಿಲ್ಪಕಲೆ, ಪುಸ್ತಕ ಓದುವುದು ಮತ್ತು ಪ್ರವಾಸ ಮಾಡುವ ಮೂಲಕ ಹೊಸ ಉತ್ಸಾಹ ಕಂಡುಕೊಂಡರು. ಕುಟುಂಬ ಹಾಗೂ ಸ್ನೇಹಿತರ ಜೊತೆ ಕಾಲ ಕಳೆದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಂಡರು. ಈ ಕಠಿಣ ಅನುಭವ ತಮಗೆ ಸಿನಿಮಾ ಕೇವಲ ಓಟದ ರೇಸ್ ಅಲ್ಲ, ಅದೊಂದು ಸೃಜನಶೀಲ ಮತ್ತು ಆಧ್ಯಾತ್ಮಿಕ ಅನುಭವ ಎಂಬುದನ್ನು ಕಲಿಸಿಕೊಟ್ಟಿತು ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ನಭಾ ನಟೇಶ್ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮೊದಲಿಗಿಂತಲೂ ಹೆಚ್ಚು ಬಲಶಾಲಿಯಾಗಿ ಚಿತ್ರರಂಗಕ್ಕೆ ಮರಳಲು ಸಿದ್ಧರಾಗಿದ್ದಾರೆ. ಸದ್ಯ ಅವರು ‘ನಾಗಬಂಧಂ’ ಮತ್ತು ‘ಸ್ವಯಂಭು’ ನಂತಹ ವಿಭಿನ್ನ ಹಾಗೂ ದೊಡ್ಡ ಬಜೆಟ್ನ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.