ಬೆಂಗಳೂರು,ಜೂ. 24 (DaijiworldNews/AK): ನವಿಲು ಗರಿಗಳನ್ನು ಬಳಸಿ ಮಾಡಿದ್ದ ‘ಹೇ ನವಿಲೇ’ ರೀಲ್ಸ್ ವಿವಾದಕ್ಕೆ ಕಾರಣವಾದ ಬಳಿಕ, ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ನಿವೇದಿತಾ ಗೌಡ ಮತ್ತು ಕಿಶನ್ಇದೀಗ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದ ಹಿನ್ನೆಲೆ, ಇಬ್ಬರೂ ರೀಲ್ಸ್ ಡಿಲೀಟ್ ಮಾಡಿ, ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಿವೇದಿತಾ ಗೌಡ ವಿಡಿಯೋ ಹಂಚಿಕೊಂಡಿದ್ದು, ವನ್ಯಜೀವಿಗಳ ವಸ್ತುಗಳನ್ನು ಅಥವಾ ಗರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಮತ್ತು ಅದರಿಂದ ವಿಡಿಯೋ ಮಾಡುವುದು ಕಾನೂನುಬಾಹಿರ. ಈ ತಪ್ಪು ತಿಳುವಳಿಕೆಯಿಂದ ಮಾಡಿದ ವಿಡಿಯೋ. ಬೇರೆ ಯಾರೂ ಕೂಡ ಈ ರೀತಿಯ ವನ್ಯಜೀವಿ ವಸ್ತುಗಳನ್ನು ಬಳಸಿ ವಿಡಿಯೋ ಮಾಡಬೇಡಿ ಎಂದು ವಿನಂತಿಸಿದ್ದಾರೆ. ಜೊತೆಗೆ ಸದ್ಯ ನಡೆಯುತ್ತಿರುವ ಇಲಾಖೆಯ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ನೋಟಿಸ್ ನೀಡಿದ ಬಳಿಕ ಕಿಶನ್ ವಿಡಿಯೊ ಬಿಡುಗಡೆ ಮಾಡಿ ತಪ್ಪೊಪ್ಪಿಕೊಂಡಿದ್ದಾರೆ. ವಿಡಿಯೊ ಮಾಡುವ ವೇಳೆ ಇದು ಕಾನೂನುಬಾಹಿರ ಎಂಬ ಮಾಹಿತಿ ನಮಗೆ ಇರಲಿಲ್ಲ. ಹಲವು ತಂಡಗಳು ಸೇರಿ ಈ ಕೊಲಾಬರೇಷನ್ ವಿಡಿಯೊ ಮಾಡಿದ್ದೆವು. ಬಳಸಿದ ನವಿಲು ಗರಿಗಳನ್ನು ಬಾಡಿಗೆಗೆ ಪಡೆದಿದ್ದೆವು ಎಂದು ಹೇಳಿದ್ದಾರೆ. ಇನ್ನು, ನಾನು ಒಬ್ಬ ಇನ್ಫ್ಲುಯೆನ್ಸರ್ ಆಗಿರುವುದರಿಂದ ಜನರಿಗೆ ತಪ್ಪು ಸಂದೇಶ ಹೋಗಬಾರದು. ಅದಕ್ಕಾಗಿ ವಿಡಿಯೊವನ್ನು ಅಳಿಸಿದ್ದೇನೆ. ಯಾರೂ ಕೂಡ ನವಿಲು ಗರಿಗಳನ್ನು ಬಳಸಬೇಡಿ ಎಂದು ಮನವಿ ಮಾಡಿದ್ದಾರೆ
ಇತ್ತೀಚೆಗೆ ನಿವೇದಿತಾ ಗೌಡ ಹಾಗೂ ಕಿಶನ್ ಸೇರಿ ‘ಹೇ ನವಿಲೇ’ ಹಾಡಿಗೆ ರೀಲ್ಸ್ ಮಾಡಿದ್ದರು. ಈ ವಿಡಿಯೊದಲ್ಲಿ ನವಿಲು ಗರಿಗಳನ್ನು ಧರಿಸಿ ನೃತ್ಯ ಮಾಡಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ನವಿಲು ರಾಷ್ಟ್ರೀಯ ಪಕ್ಷಿಯಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ವಿಶೇಷ ರಕ್ಷಣೆ ಹೊಂದಿದೆ. ನವಿಲು ಗರಿಗಳನ್ನು ಸಂಗ್ರಹಿಸುವುದು, ಬಳಸುವುದು ಹಾಗೂ ಅದರಿಂದ ವಾಣಿಜ್ಯ ಉದ್ದೇಶದ ವಿಡಿಯೋ ಮಾಡುವುದೂ ಕಾನೂನುಬಾಹಿರ ಎಂಬ ಆರೋಪ ಕೇಳಿಬಂದಿತ್ತು.