ಮುಂಬೈ, ಮೇ. 23 (DaijiworldNews/TA): ಬಾಲಿವುಡ್ ನಟಿ ಕರಿಷ್ಮಾ ತನ್ನಾ, ತಮ್ಮ ಪತಿ ವರುಣ್ ಬಂಗೇರ ಅವರ ಮಂಗಳೂರಿನ ತುಳು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ಆಚರಿಸಿಕೊಂಡಿದ್ದು, ಅದರ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.


ಗುಜರಾತಿ ಮೂಲದ ಕರಿಷ್ಮಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ದಕ್ಷಿಣ ಭಾರತದ ಸೊಗಡಿನೊಂದಿಗೆ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಸಂಪ್ರದಾಯಬದ್ಧ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದರು. ತುಳುನಾಡಿನ ಆಚರಣೆಗಳು, ಭಜನೆ, ಕೀರ್ತನೆಗಳು ಮತ್ತು ಮಂತ್ರೋಚ್ಚಾರಣೆಗಳ ಮಧ್ಯೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ತುಳು ಸಂಪ್ರದಾಯದ ಸೊಬಗು : ಪತಿ ವರುಣ್ ಬಂಗೇರಾ ಮಂಗಳೂರಿನವರಾಗಿರುವ ಹಿನ್ನೆಲೆ, ಅವರ ಕುಟುಂಬದ ಸಂಪ್ರದಾಯದಂತೆ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತುಳು ಸಂಸ್ಕೃತಿಯ ಪ್ರತಿಯೊಂದು ಸಣ್ಣ-ದೊಡ್ಡ ಆಚರಣೆಗೂ ಮಹತ್ವ ನೀಡಲಾಗಿದ್ದು, ಸೀಮಂತದ ಸಂಪೂರ್ಣ ಕಾರ್ಯಕ್ರಮ ಸಂಪ್ರದಾಯಬದ್ಧವಾಗಿ ನೆರವೇರಿತು.
ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಂಡಿರುವ ಕರಿಷ್ಮಾ, “ಅಪ್ಪ-ಅಮ್ಮ” ಎಂದು ಬರೆದುಕೊಂಡು ಭಾವುಕ ಪೋಸ್ಟ್ ಮಾಡಿದ್ದಾರೆ. ಈ ಕ್ಷಣವನ್ನು “ಕನಸು ನನಸಾದ ಕ್ಷಣ” ಎಂದು ವರ್ಣಿಸಿದ್ದಾರೆ.
ಕರಿಷ್ಮಾ ತನ್ನಾ ಮತ್ತು ವರುಣ್ ಬಂಗೇರಾ ಅವರು ಫೆಬ್ರವರಿ 5, 2022ರಂದು ವಿವಾಹವಾಗಿದ್ದರು. ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆದ ಮದುವೆ ಭಾರೀ ಗಮನ ಸೆಳೆದಿತ್ತು. ಮದುವೆಯ ನಾಲ್ಕು ವರ್ಷಗಳ ಬಳಿಕ ಇದೀಗ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಅಭಿಮಾನಿಗಳು ಮತ್ತು ಸಿನಿರಂಗದ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಕರಿಷ್ಮಾ ತನ್ನಾ ಬಾಲಿವುಡ್ ಚಿತ್ರಗಳು, ಟಿವಿ ಶೋಗಳು ಮತ್ತು OTT ಸರಣಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ‘ಸಂಜು’, ‘ಗ್ರ್ಯಾಂಡ್ ಮಸ್ತಿ’, ‘ಲಾಹೋರ್ ಕಾನ್ಫಿಡೆನ್ಷಿಯಲ್’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.