ನವದೆಹಲಿ, ಮೇ. 22 (DaijiworldNews/TA): ಸಂಗೀತ ಮಾಂತ್ರಿಕ ಇಳಯರಾಜ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಹಾಡುಗಳ ಕೃತಿಸ್ವಾಮ್ಯ ವಿಚಾರವಾಗಿ ಹಲವು ಕಾನೂನು ಹೋರಾಟಗಳಿಂದ ಸುದ್ದಿಯಾಗುತ್ತಿದ್ದು, ಇದೀಗ ದೆಹಲಿ ಹೈಕೋರ್ಟ್ನಲ್ಲಿ ಅವರಿಗೆ ಮಹತ್ವದ ಹಿನ್ನಡೆಯಾಗಿದೆ.

1981ರ ತಮಿಳಿನ ಸೂಪರ್ಹಿಟ್ ಚಿತ್ರ ಮೂಡು ಪನಿ ಚಿತ್ರದ ಐಕಾನಿಕ್ ಹಾಡಾದ ‘ಎನ್ ಇನಿಯ ಪೊನ್ ನಿಲವೆ’ ಕುರಿತ ಕೃತಿಸ್ವಾಮ್ಯ ವಿವಾದದಲ್ಲಿ, ಹಾಡಿನ ಸಂಪೂರ್ಣ ಮಾಲೀಕತ್ವ ಇಳಯರಾಜ ಅವರಿಗೆ ಸೇರಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಜಸ್ಟಿಸ್ ಸಿ. ಹರಿ ಶಂಕರ್ ಮತ್ತು ಜಸ್ಟಿಸ್ ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ, “ಹಾಡಿನ ಟ್ಯೂನ್ ಹಾಗೂ ಸಂಗೀತ ಸಂಯೋಜನೆ ಮೇಲಷ್ಟೇ ಇಳಯರಾಜ ಅವರಿಗೆ ಹಕ್ಕು ಇದೆ. ಆದರೆ ಸಾಹಿತ್ಯ ಹಾಗೂ ಸೌಂಡ್ ರೆಕಾರ್ಡ್ನ ಮಾಲೀಕತ್ವ ಆಡಿಯೋ ಸಂಸ್ಥೆ ಸರಿಗಮಗೆ ಸೇರಿದೆ” ಎಂದು ತೀರ್ಪು ನೀಡಿದೆ.
ಈ ವಿವಾದಕ್ಕೆ ಕಾರಣವಾಗಿದ್ದು ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆ ತನ್ನ ಹೊಸ ಸಿನಿಮಾದಲ್ಲಿ ಈ ಹಾಡನ್ನು ಮರುಬಳಕೆ ಮಾಡಲು ಇಳಯರಾಜರಿಂದ ಅನುಮತಿ ಪಡೆದಿರುವುದು. ಇದನ್ನು ಪ್ರಶ್ನಿಸಿ ಸರಿಗಮ ನ್ಯಾಯಾಲಯದ ಮೊರೆ ಹೋಗಿತ್ತು. 1980ರಲ್ಲಿಯೇ ಚಿತ್ರದ ನಿರ್ಮಾಪಕರಿಂದ ಹಾಡಿನ ಹಕ್ಕುಗಳನ್ನು ಅಧಿಕೃತವಾಗಿ ಖರೀದಿಸಿದ್ದೇವೆ ಎಂದು ಸರೆಗಮಾ ವಾದಿಸಿತ್ತು. ಈ ವಾದವನ್ನು ನ್ಯಾಯಾಲಯ ಮಾನ್ಯಗೊಳಿಸಿದ್ದು, ಇಳಯರಾಜ ಅವರು ಕೇವಲ ಟ್ಯೂನ್ನ ಹಕ್ಕುದಾರರು ಮಾತ್ರ, ಸಾಹಿತ್ಯ ಮತ್ತು ರೆಕಾರ್ಡ್ ಹಕ್ಕುಗಳನ್ನು ವರ್ಗಾಯಿಸುವ ಅಧಿಕಾರ ಅವರಿಗೆ ಇಲ್ಲ ಎಂದು ಹೇಳಿದೆ.
ಕೃತಿಸ್ವಾಮ್ಯ ವಿಚಾರದಲ್ಲಿ ಇಳಯರಾಜ ಅವರ ಕಾನೂನು ಹೋರಾಟ ಇದೇ ಮೊದಲಲ್ಲ. ಇಂಟೆಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್ (IPR) ಹಾಗೂ ರಾಯಲ್ಟಿ ವಿಷಯದಲ್ಲಿ ಅವರು ದಶಕಗಳಿಂದ ಕಟ್ಟುನಿಟ್ಟಿನ ನಿಲುವು ಹೊಂದಿದ್ದಾರೆ. ಈ ಹಿಂದೆ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಗಾಯಕಿ ಕೆ. ಎಸ್. ಚಿತ್ರಾ ಅವರಿಗೆ ತಮ್ಮ ಅನುಮತಿಯಿಲ್ಲದೆ ದೇಶ-ವಿದೇಶಗಳಲ್ಲಿ ತಮ್ಮ ಹಾಡುಗಳನ್ನು ಹಾಡಬಾರದು ಎಂದು ಲೀಗಲ್ ನೋಟಿಸ್ ನೀಡಿದ್ದರಿಂದ ಚಿತ್ರರಂಗದಲ್ಲಿ ಭಾರಿ ಚರ್ಚೆ ಹುಟ್ಟಿಕೊಂಡಿತ್ತು.
ಇತ್ತೀಚೆಗೆ ಮಲಯಾಳಂ ಬ್ಲಾಕ್ಬಸ್ಟರ್ ಮಂಜುಮ್ಮೆಲ್ ಬಾಯ್ಸ್ ಚಿತ್ರದಲ್ಲಿ ಗುಣ ಚಿತ್ರದ ‘ಕಣ್ಮಣಿ ಅನ್ಬೋಡು’ ಹಾಡು ಬಳಸಿದ್ದಕ್ಕೂ, ಕೂಲಿ ಚಿತ್ರದ ಟೀಸರ್ನಲ್ಲಿ ಹಳೆಯ ಹಾಡು ಬಳಕೆ ಮಾಡಿದ ವಿಚಾರಕ್ಕೂ ನಿರ್ಮಾಣ ಸಂಸ್ಥೆಗಳಿಗೆ ಇಳಯರಾಜ ಕೃತಿಸ್ವಾಮ್ಯ ಉಲ್ಲಂಘನೆ ನೋಟಿಸ್ ಕಳುಹಿಸಿ ಕೋಟ್ಯಂತರ ರೂ. ಪರಿಹಾರ ಕೋರಿದ್ದರು.