ಮುಂಬೈ, ಮೇ. 21 (DaijiworldNews/AA): ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿ ಪಾಪರಾಜಿಗಳು ಕ್ಷಮೆಯಾಚಿಸಿದ್ದಾರೆ. ಸಲ್ಮಾನ್ ಖಾನ್ ಕೂಡ ಮುನಿಸನ್ನು ಮರೆತು ಪಾಪರಾಜಿಗಳ ಕ್ಷಮೆಯನ್ನು ಸ್ವೀಕರಿಸಿದ್ದಾರೆ.

ಬುಧವಾರ ರಾತ್ರಿ ಮುಂಬೈನಲ್ಲಿ ನಡೆದ ರಾಜಾ ಶಿವಾಜಿ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಈ ವೇಳೆ ಸಲ್ಮಾನ್ ಅವರನ್ನು ಸುತ್ತುವರಿದ ಪಾಪರಾಜಿಗಳು, 'ನಮ್ಮನ್ನು ಕ್ಷಮಿಸಿ ಭಾಯ್' ಎಂದು ಕೇಳಿಕೊಂಡಿದ್ದಾರೆ.
ಇದನ್ನು ಗಮನಿಸಿದ ಸಲ್ಮಾನ್, ಫೋಟೋಗ್ರಾಫರ್ ಒಬ್ಬರನ್ನು ಹತ್ತಿರ ಬರಲು ಬಿಡುವಂತೆ ತಮ್ಮ ಸೆಕ್ಯೂರಿಟಿ ತಂಡಕ್ಕೆ ಸೂಚಿಸಿದ್ದಾರೆ. ಬಳಿಕ ಏನಾಗುತ್ತಿದೆ ಎಂದು ವಿಚಾರಿಸಿದಾಗ, ಅವರೆಲ್ಲರೂ ಕ್ಷಮೆ ಕೇಳುತ್ತಿರುವುದು ಸಲ್ಮಾನ್ಗೆ ಗೊತ್ತಾಗಿದೆ. ತಕ್ಷಣವೇ ಸಲ್ಮಾನ್ ಸನ್ನೆ ಮಾಡುತ್ತಾ, 'ಎಲ್ಲವೂ ಸರಿ ಹೋಗಿದೆ' ಎಂದು ಸಿಗ್ನಲ್ ನೀಡಿದ್ದಾರೆ.
ಈ ಸಂದರ್ಭದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಫೋಟೋಗ್ರಾಫರ್ ಒಬ್ಬರು 'ಇವತ್ತು ಯಾರೂ ಕಿರುಚಬೇಡಿ, ಲವ್ ಯೂ ಭಾಯ್' ಎನ್ನುವುದು ಕೇಳಿಸುತ್ತದೆ. ಅದಕ್ಕೆ ಸಲ್ಮಾನ್ ನಗುತ್ತಾ, 'ಹಾ, ಈ ಜಾಗ ಕಿರುಚಾಡಲು ಸರಿಯಾಗಿದೆ' ಎಂದು ಉತ್ತರಿಸಿದ್ದಾರೆ.
ನಂತರ ಪಾಪರಾಜಿಗಳು ಮಂಗಳವಾರ ರಾತ್ರಿಯ ತಮ್ಮ ನಡವಳಿಕೆಗೆ ಮತ್ತೊಮ್ಮೆ ಕ್ಷಮೆಯಾಚಿಸಿದಾಗ, ಸಲ್ಮಾನ್ ತಮಾಷೆಯಾಗಿ, 'ಸ್ವಲ್ಪ ಜೋರಾಗಿ ಹೇಳಿ, ನಿಮ್ಮ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ' ಎಂದು ಕಾಲೆಳೆದಿದ್ದಾರೆ. ಈ ವೇಳೆ ಸಲ್ಮಾನ್ ಅವರ ಪಕ್ಕದಲ್ಲಿದ್ದ ರಿತೇಶ್ ದೇಶ್ಮುಖ್ ಕೂಡ ಜೋರಾಗಿ ನಕ್ಕಿದ್ದಾರೆ.
ಮುಂಬೈನ ಆಸ್ಪತ್ರೆಯೊಂದರ ಹೊರಗಡೆ ತಮ್ಮ ಖಾಸಗಿತನಕ್ಕೆ ಧಕ್ಕೆ ತಂದ ಪಾಪರಾಜಿಗಳ ಮೇಲೆ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ತೀವ್ರ ಆಕ್ರೋಶ ಹೊರಹಾಕಿದ್ದರು. ಆದರೆ, ಈ ಘಟನೆ ನಡೆದ ಕೇವಲ ಒಂದೇ ದಿನದಲ್ಲಿ ಸಲ್ಮಾನ್ ಖಾನ್ ಬಳಿ ಪಾಪರಾಜಿಗಳು ಕ್ಷಮೆಯಾಚಿಸಿದ್ದಾರೆ.