ಬೆಂಗಳೂರು, ಮೇ. 18 (DaijiworldNews/TA): ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮತ್ತೆ ಬಿಡುಗಡೆಯಿಂದ ಹಿಂದೆ ಸರಿದಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಜೂನ್ 4ರಂದು ತೆರೆಗೆ ಬರಬೇಕಿದ್ದ ಚಿತ್ರ ಇದೀಗ ಜಾಗತಿಕ ಮಾರುಕಟ್ಟೆ ಯೋಜನೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುಂದೂಡಿಕೆಯಾಗಿದೆ.

ಈ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಯಶ್, ಅಭಿಮಾನಿಗಳ ಬೇಸರವನ್ನು ಅರ್ಥಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. “ಸಿನಿಮಾ ಪದೇ ಪದೇ ಮುಂದಕ್ಕೆ ಹೋಗುತ್ತಿರುವುದು ಖಂಡಿತವಾಗಿಯೂ ನನ್ನ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ. ಅವರು ಬೇಸರಗೊಂಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಆದರೆ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ತಲುಪಿಸಲು ಈ ನಿರ್ಧಾರ ಅನಿವಾರ್ಯವಾಗಿತ್ತು” ಎಂದು ಯಶ್ ಹೇಳಿದ್ದಾರೆ.
ಭಾರತೀಯ ಮತ್ತು ಪಾಶ್ಚಿಮಾತ್ಯ ಚಿತ್ರರಂಗದ ನಡುವಿನ ವ್ಯತ್ಯಾಸವನ್ನೂ ಅವರು ವಿವರಿಸಿದ್ದು, “ಪಾಶ್ಚಿಮಾತ್ಯ ದೇಶಗಳಲ್ಲಿ ಸಿನಿಮಾ ಪೂರ್ಣಗೊಂಡ ಬಳಿಕವೇ ವಿತರಕರಿಗೆ ತೋರಿಸಲಾಗುತ್ತದೆ. ಆದರೆ ಭಾರತದಲ್ಲಿ ಸಿನಿಮಾ ಘೋಷಣೆಯಾದ ದಿನದಿಂದಲೇ ಪ್ರಮೋಷನ್ ಆರಂಭವಾಗುತ್ತದೆ. ಇದು ದೊಡ್ಡ ಸವಾಲು” ಎಂದಿದ್ದಾರೆ. “ನನಗೆ ನನ್ನ ಜನರ ಮೇಲೆ ನಂಬಿಕೆಯಿದೆ. ನಾವು ಮಾಡುತ್ತಿರುವುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತರುವ ಕೆಲಸ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ” ಎಂದು ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೂ “ಕೆಲವು ಕಥೆಗಳು ತಾಳ್ಮೆ ಬೇಡುತ್ತವೆ. ಭಾರತೀಯ ಸಿನಿಮಾ ಜಾಗತಿಕ ಮಟ್ಟಕ್ಕೆ ಹೆಜ್ಜೆ ಇಡುತ್ತಿರುವಾಗ ಅದರ ಗುಣಮಟ್ಟವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ನನ್ನ ಮೇಲಿದೆ” ಎಂದು ಅವರು ಹೇಳಿದ್ದಾರೆ.
ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಬೀರಿರುವ ಪ್ರಭಾವ ಹಾಗೂ ‘ಸಿನಿಮಾಕಾನ್’ನಲ್ಲಿ ವಿತರಕರಿಂದ ಸಿಕ್ಕ ಭರ್ಜರಿ ಪ್ರತಿಕ್ರಿಯೆಯಿಂದ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಹೊಸ ಬಿಡುಗಡೆ ದಿನಾಂಕದ ನಿರೀಕ್ಷೆಯಲ್ಲಿ ಯಶ್ ಅಭಿಮಾನಿಗಳು ಕಾದಿದ್ದಾರೆ.