ಹೈದರಾಬಾದ್, ಏ. 11 (DaijiworldNews/TA) : ತೆಲುಗು ಹಾಗೂ ಕನ್ನಡದಲ್ಲಿ ಜನಪ್ರಿಯತೆ ಪಡೆದ ಗಾಯಕಿ ಮಂಗ್ಲಿ ವಿರುದ್ಧ ಭಾರೀ ಆರ್ಥಿಕ ಮೋಸದ ಆರೋಪ ಕೇಳಿಬಂದಿದೆ. ಸುಮಾರು 10 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಮಂಗ್ಲಿ ಹಾಗೂ ಅವರ ಸಹೋದರನ ವಿರುದ್ಧ ಕೇಸ್ ದಾಖಲಾಗಿದೆ.

ವಕೀಲರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 351(2) ಮತ್ತು 352 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಂಗ್ಲಿ ತಮ್ಮನ್ನು ಮೋಸ ಮಾಡಿದ್ದಾರೆ ಮತ್ತು ತಮ್ಮ ಜೀವಕ್ಕೆ ಅಪಾಯವಿದೆ ಎಂದು ವಕೀಲರು ಆರೋಪಿಸಿದ್ದಾರೆ.
ಮಾಹಿತಿಯ ಪ್ರಕಾರ, ಮಂಗ್ಲಿ ಮತ್ತು ಅವರ ಸಹೋದರ ಮೈಕ್ರೋ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಹೆಚ್ಚಿನ ಲಾಭ ನೀಡುವುದಾಗಿ ಭರವಸೆ ನೀಡಿ ಸುಮಾರು 100ಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸಿದ್ದಾರೆಂಬ ಆರೋಪ ಇದೆ. ಹೂಡಿಕೆ ಮಾಡಿದವರಿಗೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ನಿಗದಿತ ಸಮಯ ಕಳೆದರೂ ಹೂಡಿಕೆದಾರರಿಗೆ ಲಾಭವನ್ನೂ ನೀಡದೆ, ಮೂಲಧನವನ್ನೂ ಹಿಂದಿರುಗಿಸಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಈ ಹಿನ್ನೆಲೆ ಸಂತ್ರಸ್ತರು ವಕೀಲ ಸುಬ್ಬರಾವ್ ಅವರ ನೆರವು ಪಡೆದಿದ್ದರು. ಇದೇ ವೇಳೆ ಹಣ ಹಿಂತಿರುಗಿಸುವಂತೆ ಕೇಳಿದಾಗ ಮಂಗ್ಲಿ ಮತ್ತು ಅವರ ಸಹೋದರ ಶಿವ ಅವರು ವಕೀಲರಿಗೆ ಬೆದರಿಕೆ ಹಾಕಿದರೆಂಬ ಗಂಭೀರ ಆರೋಪವೂ ಕೇಳಿಬಂದಿದೆ. ಪ್ರಸ್ತುತ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.