ಪುಣೆ, ಮಾ. 22 (DaijiworldNews/AA): 'ಧುರಂಧರ್ 2' ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೂರೇ ದಿನಕ್ಕೆ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್ ಮಾಡಿದೆ. ಇದೀಗ ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಪವನ್ ಕಲ್ಯಾಣ್ ಮಾಜಿ ಪತ್ನಿ, ನಟಿ ರೇಣು ದೇಸಾಯಿ 'ನಾನು ಮೋದಿಜಿಯ ಹೆಮ್ಮೆಯ ಅಂಧಭಕ್ತೆ' ಎಂದಿದ್ದಾರೆ.

ರೇಣು ದೇಸಾಯಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿನಿಮಾ ಆರಂಭದಲ್ಲಿ ಬರುವ ಭಗವದ್ಗೀತೆಯ ಶ್ಲೋಕವೊಂದನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ "ನಮ್ಮ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಬಗ್ಗೆ ನಿಮಗೆ ಕಿಂಚಿತ್ತಾದರೂ ಗೌರವವಿದ್ದರೆ, ಈ ಸಿನಿಮಾ ನೋಡಿ. ಅವರ ಕಾರಣದಿಂದಲೇ ನಾವು ಮನೆಯಲ್ಲಿ ಶಾಂತಿಯಿಂದ ನಿದ್ದೆ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
'ಧುರಂಧರ್ 2' ಸಿನಿಮಾದ ಒಂದು ದೃಶ್ಯದಲ್ಲಿ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ (ಬಡೇ ಸಾಹಬ್ ಪಾತ್ರ), 'ಈ ಚಾಯ್ವಾಲಾ ಭಾರತದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಮ್ಮವರಲ್ಲಿ ಭಯ ಹೆಚ್ಚಾಗಿದೆ' ಎಂದು ಹೇಳುವ ಸಂಭಾಷಣೆಯಿದೆ. ಈ ದೃಶ್ಯದ ವಿಡಿಯೋವನ್ನು ಹಂಚಿಕೊಂಡಿರುವ ನಟಿ, "ಬಿಜೆಪಿ ಮತ್ತು ನಮ್ಮ ಅದ್ಭುತ ಪ್ರಧಾನಿ ಮೋದಿಜಿಯ ಹೆಮ್ಮೆಯ ಅಂಧಭಕ್ತೆ ನಾನು" ಎಂದು ಬರೆದುಕೊಂಡಿದ್ದಾರೆ.
ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಗಳಿಕೆ ಮಾಡಿದೆ. ಈ ಚಿತ್ರದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ಈ ಚಿತ್ರಕ್ಕೆ ಪರ-ವಿರೋಧ ವ್ಯಕ್ತಪಡಿಸಿದ್ದಾರೆ.