ಮುಂಬೈ, ಫೆ. 18 (DaijiworldNews/AA): ಜೈಲಿನಲ್ಲಿ ಧೂಮಪಾನ ಮಾಡಲು ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಬೇಕು ಎಂದು ಬಾಲಿವುಡ್ ನಟ ರಾಜ್ಪಾಲ್ ಯಾದವ್ ಜೈಲಿನ ಅನುಭವದ ಬಗ್ಗೆ ತಿಳಿಸಿದ್ದಾರೆ.

ಬಾಲಿವುಡ್ ನಟ ರಾಜ್ಪಾಲ್ ಯಾದವ್ ಅವರು ಇತ್ತೀಚೆಗೆ ಜೈಲಿಗೆ ಹೋಗಿ ಬಂದಿದ್ದಾರೆ. 9 ಕೋಟಿ ರೂಪಾಯಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರನ್ನು ತಿಹಾರ್ ಜೈಲಿಗೆ ಕಳಿಸಲಾಗಿತ್ತು. ಆದರೆ ಇದೀಗ ಅವರು ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಜೈಲಿನ ಅನುಭವದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಇರುವಂತೆ ಜೈಲಿನ ಒಳಗೆ ಧೂಮಪಾನ ಮಾಡಲು ಪ್ರತ್ಯೇಕವಾದ ಜಾಗ ಇರಬೇಕು. ಜೈಲುಗಳನ್ನು ಬದಲಾವಣೆಯ ಕೇಂದ್ರದ ರೀತಿ ಪರಿಗಣಿಸಬೇಕು. ತಮ್ಮನ್ನು ಬದಲಾಯಿಸಿಕೊಳ್ಳಲು ಖೈದಿಗಳಿಗೆ ಅವಕಾಶ ನೀಡಬೇಕು" ಎಂದಿದ್ದಾರೆ.
ಹಲವು ವರ್ಷಗಳ ಹಿಂದೆ ರಾಜ್ಪಾಲ್ ಯಾದವ್ ಅವರು ಸಿನಿಮಾ ನಿರ್ಮಾಣಕ್ಕಾಗಿ ಸಾಲ ಮಾಡಿದ್ದರು. ಆದರೆ ಅವರು ಮಾಡಿದ ಸಿನಿಮಾ ನಿರೀಕ್ಷೆಯಂತೆ ಗಳಿಕೆ ಮಾಡಲಿಲ್ಲ. ಅದರಿಂದ ಅವರಿಗೆ ಸಾಲ ತೀರಿಸುವುದು ಸಾಧ್ಯವಾಗಲಿಲ್ಲ. ದಿನದಿಂದ ದಿನಕ್ಕೆ ಬಡ್ಡಿ ಹೆಚ್ಚಿತು. ಒಟ್ಟು 9 ಕೋಟಿ ರೂಪಾಯಿ ಸಾಲ ಅವರ ಮೇಲಿದೆ. ಪದೇ ಪದೇ ಚೆಕ್ ಬೌನ್ಸ್ ಆಗಿದ್ದರಿಂದ ಅವರು ಜೈಲು ವಾಸ ಅನುಭವಿಸಬೇಕಾಯಿತು.