ನವದೆಹಲಿ, ಫೆ. 06 (DaijiworldNews/TA): ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಾಸ್ಯ ನಟ ರಾಜ್ಪಾಲ್ ಯಾದವ್ ಅವರಿಗೆ ರಿಲೀಫ್ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ, ಅವರು ಗುರುವಾರ ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾದರು. ಸಂಜೆ 4 ಗಂಟೆಗೆ ಜೈಲಿಗೆ ಆಗಮಿಸಿದ ರಾಜ್ಪಾಲ್ ಯಾದವ್ ಅವರನ್ನು ಅಗತ್ಯ ಪ್ರಕ್ರಿಯೆಗಳ ಬಳಿಕ ಜೈಲಿನಲ್ಲಿ ಇರಿಸಲಾಗಿದೆ.

ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ನಟ ರಾಜ್ಪಾಲ್ ಯಾದವ್ ಹಾಗೂ ಅವರ ಪತ್ನಿ ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿತ್ತು. ಈ ಸಂಬಂಧ 2018ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್, ರಾಜ್ಪಾಲ್ ಯಾದವ್ ಮತ್ತು ಅವರ ಪತ್ನಿಯನ್ನು ಅಪರಾಧಿಗಳೆಂದು ಘೋಷಿಸಿತ್ತು. 2019ರಲ್ಲಿ ಸೆಷನ್ ಕೋರ್ಟ್ ಕೂಡ ಈ ತೀರ್ಪನ್ನು ಎತ್ತಿ ಹಿಡಿದಿತ್ತು.
ಈ ತೀರ್ಪನ್ನು ಪ್ರಶ್ನಿಸಿ 2019ರಲ್ಲಿ ರಾಜ್ಪಾಲ್ ಯಾದವ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ಸೆಟಲ್ಮೆಂಟ್ ಮೂಲಕ ಇತ್ಯರ್ಥಪಡಿಸುವ ಪ್ರಯತ್ನ ಮಾಡುತ್ತಿರುವುದಾಗಿ ನಟ ಹೇಳಿದ್ದರಿಂದ, ಹೈಕೋರ್ಟ್ 2024ರಲ್ಲಿ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ ಈವರೆಗೆ ಹಣವನ್ನು ಹಿಂದಿರುಗಿಸದ ಕಾರಣ, ಕೋರ್ಟ್ ಕಠಿಣ ನಿಲುವು ತಾಳಿದೆ.
ಹಣ ಪಾವತಿಗೆ ಇನ್ನೂ ಕೆಲ ವಾರಗಳ ಕಾಲಾವಕಾಶ ನೀಡುವಂತೆ ರಾಜ್ಪಾಲ್ ಪರ ವಕೀಲರು ಮನವಿ ಮಾಡಿದರೂ, ಹೈಕೋರ್ಟ್ ಅದನ್ನು ತಿರಸ್ಕರಿಸಿತು. ಬುಧವಾರ ನಾಲ್ಕು ಗಂಟೆಗಳ ಒಳಗೆ ಶರಣಾಗಬೇಕೆಂದು ಕೋರ್ಟ್ ನಿರ್ದೇಶನ ನೀಡಿತ್ತು. ಈ ವೇಳೆ ನ್ಯಾಯಾಲಯ, “ಯಾವುದೇ ವ್ಯಕ್ತಿ ನಿರ್ದಿಷ್ಟ ಹಿನ್ನೆಲೆ ಅಥವಾ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈ ನ್ಯಾಯಾಲಯವು ವಿಶೇಷ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಬಾರದು. ನಿರಂತರವಾಗಿ ಅದೇ ತಪ್ಪು ಮರುಕಳಿಸುತ್ತಿದ್ದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ,” ಎಂದು ಕಠಿಣ ಟೀಕೆ ಮಾಡಿದೆ.