ಬೆಂಗಳೂರು, ಜ. 07 (DaijiworldNews/TA): ಕನ್ನಡದ ಶಿವಾಜಿ ಸುರತ್ಕಲ್ ಚಿತ್ರದ ನಟ ಧನುಷ್ ರಾಜ್ ಅವರ ವೈಯಕ್ತಿಕ ಜೀವನದ ಗೃಹ ಕಲಹ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪತ್ನಿ ಅಶ್ರಿತಾ ವಿರುದ್ಧ ಆರೋಪ ಹೊರಿಸಿ ನಟ ಧನುಷ್ ರಾಜ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದಕ್ಕೆ ಪ್ರತಿಯಾಗಿ ಪತ್ನಿಯೂ ಗಂಡನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರತ್ಯಾರೋಪದ ದೂರು ನೀಡಿದ್ದಾರೆ.

ಒಂಭತ್ತು ತಿಂಗಳ ಹಿಂದೆ ವಿವಾಹವಾಗಿದ್ದ ಧನುಷ್ ರಾಜ್ ಮತ್ತು ಅಶ್ರಿತಾ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ತೀವ್ರಗೊಂಡಿದ್ದು, ಜಗಳ ಪೊಲೀಸ್ ಪ್ರಕರಣಗಳ ಮಟ್ಟಕ್ಕೆ ತಲುಪಿದೆ. ಪತ್ನಿ ಸದಾ ನನ್ನ ಮೇಲೆ ಅನುಮಾನ ಪಡುತ್ತಾಳೆ, ನಾನು ಎಲ್ಲಿಗೆ ಹೋದರೂ ಡೌಟ್ ಮಾಡುತ್ತಾಳೆ ಎಂದು ನಟ ಆರೋಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ನನ್ನ ಮೇಲೆಯೇ ಹಲ್ಲೆ ನಡೆಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಟ ಧನುಷ್ ರಾಜ್ ಅವರ ದೂರಿನ ಪ್ರಕಾರ, ಕೆಲಸದ ನಿಮಿತ್ತ ಅವರು ಇತ್ತೀಚೆಗೆ ವಿದೇಶಕ್ಕೆ ತೆರಳಿದ್ದರು. ವಾಪಸ್ ಬಂದ ಬಳಿಕ ಪತ್ನಿ ಅಶ್ರಿತಾ, ನಾನು ಬೇರೆ ಯುವತಿಯೊಂದಿಗೆ ವಿದೇಶಕ್ಕೆ ಹೋಗಿದ್ದೇನೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಗೂಂಡಾಗಳನ್ನು ಕರೆಸಿ ಕೊಲೆ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪತ್ನಿ ತನ್ನ ಆರೋಪಗಳನ್ನು ಸಾಬೀತುಪಡಿಸಲು ಬಾತ್ರೂಮಿನ ಗಾಜು ಒಡೆದು ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ನಟ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ವಿವರಣೆಗಳನ್ನು ಪತ್ನಿ ನಂಬದೆ ಅಕ್ರಮ ಸಂಬಂಧದ ಆರೋಪ ಮಾಡುತ್ತಿದ್ದಾಳೆ ಎಂದೂ ಅವರು ಹೇಳಿದ್ದಾರೆ. ಹೆಂಡತಿಯ ಕಿರುಕುಳದಿಂದ ಬೇಸತ್ತು ಪೊಲೀಸ್ ಠಾಣೆಗೆ ದೂರು ನೀಡಬೇಕಾದ ಸ್ಥಿತಿ ಎದುರಾಗಿದೆ ಎಂದು ಧನುಷ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಪತ್ನಿ ಅಶ್ರಿತಾ ಗಂಡನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರುವ ಅಶ್ರಿತಾ, ನಟ ಧನುಷ್ ರಾಜ್ ವರದಕ್ಷಿಣೆ ಕಿರುಕುಳ ನೀಡಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮದುವೆಯ ವೇಳೆ 50 ಗ್ರಾಂ ಚಿನ್ನ ಪಡೆದು, ಬಳಿಕ 8 ಲಕ್ಷ ರೂಪಾಯಿ ವರದಕ್ಷಿಣೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಗಂಡ ಇನ್ಸ್ಟಾಗ್ರಾಮ್ನಲ್ಲಿ ಇತರ ಯುವತಿಯರೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದು, ಫೋನ್ ಪರಿಶೀಲಿಸಿದಾಗ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದ ಚಿತ್ರಗಳು ಪತ್ತೆಯಾಗಿವೆ ಎಂದು ಪತ್ನಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ದೈಹಿಕವಾಗಿ ಹಲ್ಲೆ ಮಾಡಿ ಮಾನಸಿಕ ಹಾಗೂ ಶಾರೀರಿಕ ಹಿಂಸೆ ನೀಡಲಾಗಿದೆ ಎಂದು ಅಶ್ರಿತಾ ದೂರಿದ್ದಾರೆ.
ಪ್ರಸ್ತುತ ಪತಿ-ಪತ್ನಿಯ ಪರಸ್ಪರ ದೂರುಗಳ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸ್ ಠಾಣೆ ಹಾಗೂ ದಕ್ಷಿಣ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಲವಾರು ಕನ್ನಡ ಸಿನಿಮಾಗಳು, ಶಾರ್ಟ್ ಮೂವಿಗಳು ಮತ್ತು ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿರುವ ನಟ ಧನುಷ್ ರಾಜ್ ಅವರ ವೈಯಕ್ತಿಕ ಬದುಕಿನ ಈ ಬೆಳವಣಿಗೆ ಸ್ಯಾಂಡಲ್ವುಡ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.