ಬೆಂಗಳೂರು, ಡಿ. 19 (DaijiworldNews/TA): ರಾಜಧಾನಿ ಬೆಂಗಳೂರಿನ ಕಸದ ಸಮಸ್ಯೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗುತ್ತಿರುವ ನಡುವೆ, ಇದೇ ಸಮಸ್ಯೆ ಸ್ಯಾಂಡಲ್ವುಡ್ ನಟಿ ಐಂದ್ರಿತಾ ರೇಗೂ ತೀವ್ರವಾಗಿ ತಟ್ಟಿದೆ. ಉಸಿರಾಡುವುದಕ್ಕೂ ತೊಂದರೆ ಆಗುತ್ತಿದೆ ಎಂದು ಹೇಳುತ್ತಾ ನಟಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಆರ್ಆರ್ ನಗರದಲ್ಲಿರುವ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ಐಂದ್ರಿತಾ ರೇ, ಕಳೆದ ಮೂರು ದಿನಗಳಿಂದ ಕಸದ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕಸದ ರಾಶಿಗೆ ಬೆಂಕಿ ಹಚ್ಚುತ್ತಿರುವುದರಿಂದ ಅಪಾರ್ಟ್ಮೆಂಟ್ ಸುತ್ತಮುತ್ತೆಲ್ಲಾ ಹೊಗೆ ಆವರಿಸಿ, ಮನೆಯೊಳಗಿದ್ದರೂ ಉಸಿರಾಟದ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
ಈ ಸಮಸ್ಯೆ ಬಗ್ಗೆ ಪಾಲಿಕೆ ಸಹಾಯವಾಣಿಗೆ ಕರೆ ಮಾಡಿದರೆ ಫೋನ್ ಸ್ವಿಚ್ಡ್ ಆಫ್ ಬರುತ್ತಿದೆ. ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಬೇಕು ಎಂದು ಪ್ರಶ್ನಿಸಿದ ನಟಿ, ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಟ್ಯಾಗ್ ಮಾಡಿದ್ದಾರೆ.
ರೆಸಿಡೆನ್ಷಿಯಲ್ ಪ್ರದೇಶದಲ್ಲಿ ಕಸ ಸುಡುವುದು ನಿಯಮಬಾಹಿರವಾಗಿದ್ದರೂ ಸಹ ನಿರಂತರವಾಗಿ ಕಸದ ರಾಶಿಗೆ ಬೆಂಕಿ ಹಚ್ಚಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಸ ವಿಲೇವಾರಿ ಜವಾಬ್ದಾರಿ ಹೊಂದಿರುವ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವರೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಒಟ್ಟಾರೆ, ನಟಿ ಐಂದ್ರಿತಾ ರೇ ಅವರ ಮನವಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.