ಮುಂಬೈ, ನ. 04 (DaijiworldNews/TA): ಸಿನಿಮಾಗಳಂತೆ ಧಾರಾವಾಹಿಗಳೂ ಪ್ರೇಕ್ಷಕರ ಮನಗೆದ್ದಿವೆ. ಲಾಕ್ಡೌನ್ ನಂತರ ಧಾರಾವಾಹಿಗಳನ್ನು ನೋಡುವ ವೀಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಹಲವು ಟೆಲಿವಿಷನ್ ನಟಿಯರು ಇದೀಗ ಚಲನಚಿತ್ರರಂಗದಲ್ಲಿಯೂ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಕೆಲವರು ತಮಗೆ ಬಂದ ಸಣ್ಣ ಪರದೆ ಪಾತ್ರಗಳಿಂದಲೇ ಅಭಿಮಾನಿ ಬಳಗವನ್ನು ಕಟ್ಟಿ, ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟಾರ್ ಹೀರೋಗಳಿಗೂ ಸಮಾನವಾದ ಜನಪ್ರಿಯತೆ ಗಳಿಸಿದ್ದಾರೆ.

ಅಂತಹ ಚರ್ಚೆಯ ಮಧ್ಯೆ ಈಗ ಎಲ್ಲರ ಗಮನ ಸೆಳೆದಿರುವವರು ಬಾಲಿವುಡ್ನ ಯುವ ನಟಿ ಜನ್ನತ್ ಜುಬೈರ್. ಕೇವಲ 23ರ ಹರೆಯದಲ್ಲೇ ಈಕೆ ಸಾಮಾಜಿಕ ಮಾಧ್ಯಮದಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದ್ದಾಳೆ. ಇನ್ಸ್ಟಾಗ್ರಾಮ್ನಲ್ಲಿ ಜನ್ನತ್ಗೆ 49.7 ಮಿಲಿಯನ್ ಫಾಲೋವರ್ಸ್ ಇದ್ದು, ಫಾಲೋವರ್ಸ್ ಸಂಖ್ಯೆಯಲ್ಲಿ ಸ್ವತಃ ಶಾರುಖ್ ಖಾನ್ ಅವರಿಗಿಂತಲೂ ಮುಂದೆ ಇದ್ದಾರೆ.
ಬಾಲ ಕಲಾವಿದೆಯಾಗಿ ಕಿರುತೆರೆಯ ಮೂಲಕ ವೃತ್ತಿಜೀವನ ಪ್ರಾರಂಭಿಸಿದ ಜನ್ನತ್ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ತನ್ನ ಮುದ್ದಾದ ನಟನೆ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಈ ನಟಿ ನಂತರ ಬಾಲಿವುಡ್ನತ್ತ ಕಾಲಿಟ್ಟರು. ರಾಣಿ ಮುಖರ್ಜಿ ನಾಯಕಿಯಾಗಿ ನಟಿಸಿದ ‘ಹಿಚ್ಕಿ’ ಸಿನಿಮಾದಲ್ಲಿ ಜನ್ನತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಚಿತ್ರರಂಗದಲ್ಲೇ ಮಾತ್ರ ಅಲ್ಲ, ಸಾಮಾಜಿಕ ಮಾಧ್ಯಮದಲ್ಲಿಯೂ ಜನ್ನತ್ಗಿರುವ ಪ್ರಭಾವ ಅಸಾಧಾರಣ. ಆಕೆ ಹಂಚುವ ಪ್ರತಿಯೊಂದು ಫೋಟೋ, ವಿಡಿಯೋಗಳು ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ. ಅಭಿಮಾನಿಗಳು ಪ್ರತಿಯೊಂದು ಪೋಸ್ಟ್ಗೂ ಲಕ್ಷಾಂತರ ಲೈಕ್ಸ್ಗಳ ಮಳೆ ಸುರಿಸುತ್ತಿದ್ದಾರೆ.
ಆಶ್ಚರ್ಯಕರ ಸಂಗತಿ ಎಂದರೆ, ಕೇವಲ 23 ವರ್ಷ ವಯಸ್ಸಿನ ಈ ನಟಿಯ ಆಸ್ತಿ ರೂ. 250 ಕೋಟಿಗೂ ಹೆಚ್ಚು ಎನ್ನಲಾಗಿದೆ. ಬಾಲಿವುಡ್ನ ಅನೇಕ ಹಿರಿಯ ನಟಿಯರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿರುವ ಜನ್ನತ್, ಪ್ರಸ್ತುತ ಅತ್ಯಂತ ಹೆಚ್ಚು ಪಾವತಿ ಪಡೆಯುವ ಸೀರಿಯಲ್ ನಟಿಯೆಂದು ಪರಿಗಣಿಸಲ್ಪಡುತ್ತಿದ್ದಾರೆ.
ಟಿವಿ ಧಾರಾವಾಹಿಗಳಿಂದ ಆರಂಭಿಸಿ, ಸಾಮಾಜಿಕ ಮಾಧ್ಯಮದ ಸ್ಟಾರ್ ಆಗಿ ಬೆಳೆಯುತ್ತಿರುವ ಜನ್ನತ್ ಜುಬೈರ್ ಈಗ ಚಲನಚಿತ್ರರಂಗದಲ್ಲಿಯೂ ಬ್ಯುಸಿ ಆಗಿದ್ದು, ಮುಂದಿನ ವರ್ಷ ಹಲವು ಹೊಸ ಯೋಜನೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.