ಮುಂಬೈ, ಆ. 27 (DaijiworldNews/AA): 'ಕುಟುಂಬದ ಇಮೇಜ್ ಅನ್ನು ಕಾಪಾಡುವುದಕ್ಕಿಂತ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು' ಎಂದು ಬಾಲಿವುಡ್ ನಟ ಸಂಜಯ್ ದತ್ ಬಗ್ಗೆ ಪುತ್ರಿ ತ್ರಿಶಾಲಾ ಅಸಮಾಧಾನ ಹೊರಹಾಕಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ತ್ರಿಶಾಲಾ ಅವರು, 'ಪ್ರತಿಯೊಬ್ಬ ವ್ಯಕ್ತಿಯು ನಿಮ್ಮ ಜೀವನದಲ್ಲಿ ತಮ್ಮದೇ ಆದ ಜಾಗವನ್ನು ಸೃಷ್ಟಿಸಿಕೊಳ್ಳುತ್ತಾನೆ. ಅದು ಎಲ್ಲಾ ಸಮಯದಲ್ಲೂ ಆಗುವುದಿಲ್ಲ. ನೀವು ರಕ್ತಸಂಬಂಧಿಗಳಾಗಿದ್ದರೂ ಸಹ, ಅದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಅತ್ಯಂತ ದಣಿದ, ಅಸಮ್ಮತಿ ಸೂಚಿಸುವ ಮತ್ತು ತಿರಸ್ಕರಿಸುವ ಜನರು ನಿಮ್ಮ ಸ್ವಂತ ಕುಟುಂಬವಾಗುತ್ತಾರೆ, ಅದು ಯಾವಾಗ ಎಂದು ನಿಮಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶಾಂತಿಯನ್ನು ಬಯಸುತ್ತಾರೆ. ಕುಟುಂಬದ ಇಮೇಜ್ ಅನ್ನು ಕಾಪಾಡಿಕೊಳ್ಳುವುದಕ್ಕಿಂತ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ' ಎಂದು ಬರೆದುಕೊಂಡಿದ್ದಾರೆ.
'ನಿರಂತರವಾಗಿ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಮತ್ತು ನೋಯಿಸುವ ಜನರಿಂದ ದೂರವಿರಿ. ಹಾಗಾದರೆ ಆ ವ್ಯಕ್ತಿ ನಿಮ್ಮನ್ನು ನೋಡಿಕೊಂಡಿದ್ದರೂ ಪರವಾಗಿಲ್ಲ. ಆ ವ್ಯಕ್ತಿಯನ್ನು ನಿಮ್ಮ ಹತ್ತಿರಕ್ಕೂ ಬರಲು ಬಿಡಬೇಡಿ. ಪೋಷಕರು ಕುಟುಂಬ ಹೇಗಿದೆ ಎನ್ನುವುದಕ್ಕಿಂತ ಜಗತ್ತಿನಲ್ಲಿ ಅವರು ಹೇಗೆ ಕಾಣುತ್ತಾರೆ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸಿದಾಗ, ಅದು ಒಂದು ಸಮಸ್ಯೆಯಾಗಿದೆ' ಎಂದು ಪೋಸ್ಟ್ ಮಾಡಿದ್ದಾರೆ.
ತ್ರಿಶಾಲಾ ದತ್ ಅವರು ನಟ ಸಂಜಯ್ ದತ್ ಅವರ ಮೊದಲ ಪತ್ನಿ ರಿಚಾ ಶರ್ಮಾ ಅವರ ಪುತ್ರಿ. ಇನ್ನು ತ್ರಿಶಾಲ ಅವರು ಮಾಡಿರುವ ಈ ಪೋಸ್ಟ್ ನಿಂದಾಗಿ, ಸಂಜಯ್ ಮತ್ತು ತ್ರಿಶಾಲ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದೆಯೇ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.