ಬೆಂಗಳೂರು, ಆ. 08 (DaijiworldNews/TA): ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಈಗ ಮತ್ತೊಂದು ಪ್ರಮುಖ ಅಪ್ಡೇಟ್ ನೀಡಿದೆ. ಚಿತ್ರ ತಂಡ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಈ ಚಿತ್ರದ ನಾಯಕಿ ಪಾತ್ರವನ್ನು ಬಹಿರಂಗಪಡಿಸಿದ್ದು, ಅದರಲ್ಲಿ ನಟಿಸುತ್ತಿರುವವರು ರುಕ್ಮಿಣಿ ವಸಂತ್!

ಕನಕವತಿ ಎಂಬ ರಾಜಕುಮಾರಿಯ ಪಾತ್ರದಲ್ಲಿ ರುಕ್ಮಿಣಿ :
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಭರ್ಜರಿ ಚಿತ್ರದಲ್ಲಿ ರುಕ್ಮಿಣಿ ವಸಂತ್ "ಕನಕವತಿ" ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್ನಲ್ಲಿ ಅವರು ರಾಜವಂಶದ ಯುವರಾಣಿಯಂತೆ ಕಾಣುತ್ತಿದ್ದಾರೆ. ಹಿಂದಿನ ಹಿನ್ನೆಲೆ ಕೂಡ ಅರಮನೆ ಶೈಲಿಯಲ್ಲಿದ್ದು, ಇದು ಕದಂಬರ ಕಾಲದ ಕಥೆ ಎಂಬ ಅಭಿಪ್ರಾಯಕ್ಕೆ ಬಲ ನೀಡಿದೆ.
ಈ ಹಿಂದೆ ‘ಸಪ್ತ ಸಾಗರದಾಚೆ ಎಲ್ಲೋ’ ಮೂಲಕ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ ರುಕ್ಮಿಣಿ, ಈಗ ಪ್ಯಾನ್ ಇಂಡಿಯಾ ಅಭಿಮಾನಿಗಳ ಮದ್ಯೆ ಹೆಸರು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ‘ಕಾಂತಾರ’ ತಂಡದ ಭಾಗವಾಗಿರುವುದು ನಿರೀಕ್ಷೆಗಳನ್ನು ಹೆಚ್ಚಿಸಿದೆ. ಚಿತ್ರದ ಬಿಡುಗಡೆಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವುದರಿಂದ, ಟೀಂ ಈಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ನಾಯಕಿಯ ಪರಿಚಯದೊಂದಿಗೆ ಪ್ರಚಾರಕ್ಕೆ ಚಾಲನೆ ದೊರಕಿದೆ. ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿದ್ದು, ಪೋಸ್ಟರ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ಚಿತ್ರಕ್ಕೆ ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್ ಸಂಗೀತ, ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯ, ವಿಜಯ್ ಕಿರಗಂದೂರು ನಿರ್ಮಾಪಕ, ಇವೆಲ್ಲದರೊಂದಿಗೆ ಚಿತ್ರ ಭಾರಿ ಮಟ್ಟದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಅಕ್ಟೋಬರ್ 2ರಂದು, ಈ ಮಹತ್ವದ ಚಿತ್ರವು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.