ಬೆಂಗಳೂರು, ಜು. 30 (DaijiworldNews/AA): ನನ್ನ ಹೆಸರು, ಫೋಟೋ ಬಳಸಿಕೊಂಡು ನಕಲಿ ಅಕೌಂಟ್ ಸೃಷ್ಟಿಸಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದಾರೆ ಎಂದು ಆರೋಪಿಸಿ ಹಿರಿಯ ನಟ, ನಿರ್ದೇಶಕ ಎಸ್. ನಾರಾಯಣ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ನನ್ನ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ, ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಅಪ್ಪು, ಶಿವಣ್ಣ, ಸುದೀಪ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಕುರಿತು ನನಗೆ ಐಡಿಯಾ ಇರಲಿಲ್ಲ. ನನ್ನ ಸ್ನೇಹಿತರು ಗಮನಕ್ಕೆ ತಂದಿದ್ದಾರೆ. ಸುಮಾರು ಐದಾರು ತಿಂಗಳಿಂದ ಈ ರೀತಿ ಮಾಡಿದ್ದಾರೆ. ನಾಲ್ಕೈದು ದಿನಗಳ ಹಿಂದೆ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಪೋಸ್ಟ್ ಮಾಡಿದವರ ವಿರುದ್ಧ ದೂರು ಕೊಟ್ಟಿದ್ದೇನೆ" ಎಂದರು.
"ನನ್ನ ಹೆಸರು ಬಳಸಿ ಸೃಷ್ಟಿಸಿರುವ ಈ ಅಕೌಂಟ್ನಲ್ಲಿ ಸ್ಟಾರ್ ನಟರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಪುನೀತ್, ಶಿವರಾಜ್ ಕುಮಾರ್, ಯುವರಾಜ್ ಕುಮಾರ್, ಸುದೀಪ್ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಕರ್ನಾಟಕದಲ್ಲಿ ಇದು ಹೆಚ್ಚಾಗಿದ್ದು, ಕನ್ನಡಿಗರಿಗೆ ಅವಮಾನವಾಗಿದೆ. ಒಂದು ಚೌಕಟ್ಟನ್ನು ದಾಟಬಾರದು, ತೇಜೋವಧೆ ಮಾಡಬಾರದು. ಎಲ್ಲರ ಜೊತೆ ನನಗೆ ಉತ್ತಮ ಸಂಬಂಧವಿದೆ" ಎಂದು ತಿಳಿಸಿದರು.
"ಈ ರೀತಿ ಚಿತ್ರರಂಗ ಬೇರೆ ಕಡೆ ಹೋಗುತ್ತಿರೋದು ಸರಿಯಲ್ಲ. ಈ ಹಿಂದೆಯೂ ಫ್ಯಾನ್ಸ್ ವಾರ್ ಇತ್ತು, ಆದ್ರೆ ಮಿತಿ ಮೀರಿ ಹೋಗುತ್ತಿರಲಿಲ್ಲ. ಇದು ಅಸಹ್ಯಕಾರಿ ಬೆಳವಣಿಗೆ, ನಾವು ತಲೆತಗ್ಗಿಸುವಂತೆ ಆಗುತ್ತಿದೆ. ಪ್ರತಿಯೊಬ್ಬರು ಕೂಡ ನಾಗರಿಕರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಮಾನವರು ಹೇಗೆ ಮಾತನಾಡಬೇಕು ಎಂಬುದನ್ನು ತಿಳಿಯಬೇಕು. ವಾಣಿಜ್ಯ ಮಂಡಳಿ ಈ ಬಗ್ಗೆ ಏನು ಮಾಡುತ್ತೆ ಎಂಬುದನ್ನು ನೋಡುತ್ತೇನೆ. ಉದ್ಯಮ ಇಂತಹ ಸಂದರ್ಭದಲ್ಲಿ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು. ಯಾವುದೇ ಕಲಾವಿದರ ಅಭಿಮಾನಿಗಳು ನನ್ನ ಟಾರ್ಗೆಟ್ ಮಾಡಿಲ್ಲ" ಎಂದು ಹೇಳಿದರು.