ಬೆಂಗಳೂರು, ಜು. 05 (DaijiworldNews/AA): 'ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೆ ಅನಿಸುತ್ತದೆ' ಎಂದು ನಟಿ ರಶ್ಮಿಕಾ ಮಂದಣ್ಣ ಅವರು ಹೇಳಿಕೆ ನೀಡಿದ್ದು, ಇದೀಗ ವಿವಾದ ಸೃಷ್ಟಿಸಿದೆ. ಸದ್ಯ ನಟಿಯ ಈ ಹೇಳಿಕೆ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಮಾತನಾಡುತ್ತಾ, "ಕೊಡವ ಸಮುದಾಯದಿಂದ ಇಲ್ಲಿಯವರೆಗೆ ಯಾರೂ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ, ನಾನೇ ಫಸ್ಟ್ ಅನ್ನಿಸುತ್ತೆ ಸಿನಿಮಾ ಇಂಡಸ್ಟ್ರಿಗೆ ನಟಿಯಾಗಿ ಬಂದಿರೋದು. ನಮ್ಮ ಸಮುದಾಯದವರು ತುಂಬಾನೇ ಜಡ್ಜ್ ಮಾಡುತ್ತಾರೆ. ನಾನು ಆಡಿಷನ್ ಮಾಡುತ್ತೇನೆ ಎಂದು ನನ್ನ ಕುಟುಂಬದವರಿಗೆ ಹೇಳಿರಲಿಲ್ಲ. ಸಿನಿಮಾ ರಂಗಕ್ಕೆ ಹೋಗುತ್ತೇನೆ ಎಂದು ಕೂಡ ಅವರಿಗೆ ತಿಳಿಸಿರಲಿಲ್ಲ" ಎಂದು ಹೇಳಿದ್ದಾರೆ.
ಈ ವೇಳೆ ಸಂದರ್ಶಕಿ ನೀವೇ ಮೊದಲು ಎಂದು ಜನ ನಿರ್ಧರಿಸಿದ್ದಾರಾ ಎಂದು ಕೇಳಿದಾಗ. ನಟಿ "ಖಂಡಿತ ಕೊಡವ ಸಮುದಾಯದವರು ಇದನ್ನು ನಿರ್ಧರಿಸಿದ್ದಾರೆ" ಎಂದು ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಶ್ಮಿಕಾ ಅವರು ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.
ಈ ರೀತಿ ಹೇಳಿಕೆ ನೀಡುವ ಮೂಲಕ ನಟಿ ರಶ್ಮಿಕಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈಗಾಗಲೇ ಕೊಡವ ಸಮುದಾಯದಿಂದ ನಟಿ ಪ್ರೇಮ, ನಿಧಿ ಸುಬ್ಬಯ್ಯಾ, ಹರ್ಷಿಕ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿ ಸಾಕಷ್ಟು ನಾಯಕಿಯರು ಚಿತ್ರರಂಗಕ್ಕೆ ಬಂದಿದ್ದು, ಖ್ಯಾತಿಯನ್ನು ಗಳಿಸಿದ್ದಾರೆ.