ದೆಹಲಿ, ಫೆ 23(DaijiworldNews/AA): ಎರಡು ದಿನಗಳ ಹಿಂದಷ್ಟೇ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಜೋಡಿಗೆ ಶುಭಾಶಯ ತಿಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದಾರೆ.
![](https://daijiworld.ap-south-1.linodeobjects.com/Linode/img_tv247/AA-230224-modiwish.jpg)
ರಾಕುಲ್ ಹಾಗೂ ಜಾಕಿ ಅವರ ಮದುವೆಗೆ ಅನೇಕ ಗಣ್ಯರನ್ನು ಆಹ್ವಾನಿಸಲಾಗಿತ್ತು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಆಹ್ವಾನಿಸಲಾಗಿತ್ತು. ಆದರೆ ಮೋದಿ ಅವರಿಗೆ ಈ ಮದುವೆಗೆ ಬರಲು ಸಾಧ್ಯವಾಗದೇ, ನವ ಜೋಡಿಗೆ ಅಭಿನಂದನೆ ತಿಳಿಸಿ ಪತ್ರ ಬರೆದಿದ್ದಾರೆ. ಇನ್ನು ಈ ಪತ್ರವನ್ನು ನಟಿ ರಾಕುಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರು ಬರೆದ ಪತ್ರದಲ್ಲಿ 'ಜಾಕಿ ಮತ್ತು ರಾಕುಲ್ ಜೀವಮಾನವಿಡೀ ಇರುವ ವಿಶ್ವಾಸ ಹಾಗೂ ಸಹಬಾಳ್ವೆಯ ಪ್ರಯಾಣ ಆರಂಭಿಸಿದ್ದೀರಿ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು. ಮುಂಬರುವ ವರ್ಷಗಳು ಈ ಜೋಡಿ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಅವಕಾಶವಾಗಿದೆ. ಈ ಜೋಡಿಯ ಮನಸ್ಸು, ಹೃದಯ, ಕೆಲಸ ಒಂದೇ ಆಗಿರಲಿ. ಸದಾಕಾಲ ಒಬ್ಬರಿಗೊಬ್ಬರು ಜೊತೆಯಾಗಿರಲಿ. ಬದುಕಿನ ಪಯಣದಲ್ಲಿ ನಿಮ್ಮ ಜೋಡಿ ಪರ್ಫೆಕ್ಟ್ ಆಗಿರಲಿ. ಮದುವೆಗೆ ಆಹ್ವಾನ ಮಾಡಿದಕ್ಕೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ.
ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ರಾಕುಲ್ ಹಾಗೂ ಜಾಕಿ ಅವರು ಇದೀಗ ಹಸೆಮಣೆ ಏರಿದ್ದಾರೆ. ಈ ಜೋಡಿಯ ವಿವಾಹಕ್ಕೆ ಬಾಲಿವುಡ್ ನ ದೊಡ್ಡ ತಾರಾಬಳಗವೇ ಆಗಮಿಸಿತ್ತು. ಇನ್ನು ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳು ಶುಭಹಾರೈಸಿದ್ದಾರೆ.