ದೆಹಲಿ, ಜ 09 (DaijiworldNews/AA): ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ದೇಶದ 2ನೇ ಅತ್ಯುನ್ನತ ಕ್ರೀಡಾ ಗೌರವ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
![](https://daijiworld.ap-south-1.linodeobjects.com/Linode/img_tv247/AA-090124-shami.jpg)
ದೆಹಲಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಿದರು. 2023ರ ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಾರಣ ಶಮಿ ಅವರನ್ನು ಬಿಸಿಸಿಐ ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು.
2023 ರ ಏಕದಿನ ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಮೊಹಮ್ಮದ್ ಶಮಿ ಅವರು ಕೇವಲ 7 ಪಂದ್ಯಗಳನ್ನು ಆಡಿದ್ದರು. ಈ ಸಂದರ್ಭ 10.70 ರ ಸರಾಸರಿಯಲ್ಲಿ ಆಡಿದ 7 ಪಂದ್ಯಗಳಿಂದ 24 ವಿಕೆಟ್ ಗಳನ್ನು ಪಡೆಯುತ್ತಾರೆ. ಈ ಮೂಲಕ 2023 ರ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಆಗಿ ಅವರು ಹೊರಹೊಮ್ಮಿದ್ದಾರೆ. ಶಮಿ ಅವರು ಪ್ರದರ್ಶಿಸಿದ ಅತ್ಯುತ್ತಮ ಪ್ರದರ್ಶನದ ಪ್ರತಿಫಲವಾಗಿ ಇದೀಗ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು.