Karavali
ಉಳ್ಳಾಲ ದರ್ಗಾಕ್ಕೆ ಕಾನೂನು ಬದ್ಧವಾಗಿ ಚುನಾವಣೆ ನಡೆಸಿ ವಕ್ಫ್ ಬೋರ್ಡ್ ಸಮಿತಿ ರಚಿಸಿದೆ
- Mon, Mar 13 2023 04:34:40 PM
-
ಉಳ್ಳಾಲ,ಮಾ 13 (DaijiworldNews/MS): : ವಕ್ಫ್ ಆಕ್ಟ್ ಉಲ್ಲಂಘಿಸಿ ದರ್ಗಾಕ್ಕೆ ಹೊಸ ಆಡಳಿತ ಸಮಿತಿ ರಚನೆ ಆಗಿದೆ ಎಂಬ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದ ಮಾತು ಸತ್ಯಕ್ಕೆ ದೂರವಾಗಿದ್ದು, ಉಳ್ಳಾಲ ಜುಮ್ಮಾ ಮಸೀದಿ ಮತ್ತು ಅಧೀನ ಸಂಸ್ಥೆಗಳ ಆಡಳಿತ ಸಮಿತಿ ಗೆ ವಕ್ಫ್ ಬೋರ್ಡ್ ಕಾನೂನು ಬದ್ಧವಾಗಿ ಚುನಾವಣೆ ನಡೆಸಿ ನೂತನ ಆಡಳಿತ ಸಮಿತಿ ರಚನೆ ಮಾಡಿ ಅಧಿಕಾರ ಹಸ್ತಾಂತರ ಮಾಡಿದೆ ಎಂದು ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಹೇಳಿದ್ದಾರೆ.
ಅವರು ಸೋಮವಾರ ದರ್ಗಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಅಧಿಕಾರ ಹಸ್ತಾಂತರ ಸಮಯದಲ್ಲಿ ಸಂಪ್ರದಾಯ ಪ್ರಕಾರ ಹಳೆ ಸಮಿತಿ ಸದಸ್ಯರೆಲ್ಲ ಹಾಜರಿದ್ದು ಅಧಿಕಾರ ಹಸ್ತಾಂತರ ನಡೆಯಬೇಕಿತ್ತು. ಆದರೆ ಮಾ.8ರಂದು ವಕ್ಫ್ ಬೋರ್ಡ್ ಅಧಿಕಾರಿಗಳು ಆಯ್ಕೆ ಆದ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿಆಡಳಿತದಲ್ಲಿದ್ದ ಸಮಿತಿಯ ಮೂವರು ಪದಾಧಿಕಾರಿಗಳು ಮಾತ್ರ ಹಾಜರಿದ್ದು, ಅಧ್ಯಕ್ಷ ಸಹಿತ ಉಳಿದವರು ಗೈರು ಆಗಿದ್ದರು. ಅಲ್ಲದೆ ಯಾವುದೇ ದಾಖಲೆ ಪತ್ರ ನೀಡಿ ಅಧಿಕಾರ ಹಸ್ತಾಂತರ ಮಾಡದ ಕಾರಣ ವಕ್ಫ್ ಬೋರ್ಡ್ ಅಧಿಕಾರ ಹಸ್ತಾಂತರ ಮಾಡಿದೆ. ಈ ವೇಳೆ ವಾಹನ, ಹಾಗೂ ದರ್ಗಾಕ್ಕೆ ಸಂಬಂಧಪಟ್ಟ ಕೀಲಿ ಕೈ ನೀಡದೇ ಅನ್ಯಾಯ ಮಾಡಿದ್ದಾರೆ. ಚುನಾವಣೆ ದಿನ ದರ್ಗಾಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಅಪಹರಿಸಲೂ ಯತ್ನಿಸಿದಾಗ ಸ್ಥಳೀಯರೇ ಪತ್ತೆ ಹಚ್ಚಿ ವಕ್ಫ್ ಬೋರ್ಡ್ ಗೆ ಮಾಹಿತಿ ನೀಡಿದ್ದಾರೆ ಎಂದರು.ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಮಾತನಾಡಿ,ಏಳು ವರ್ಷಗಳ ಕಾಲ ಅಧಿಕಾರದಲ್ಲಿದ್ದು ಸುಸಜ್ಜಿತ ಆಡಳಿತ ನೀಡದೆ ಕಾನೂನು ಬಾಹಿರವಾಗಿ ಕುರ್ಚಿಯಲ್ಲೇ ಕುಳಿತ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಅವರು ಸುದ್ದಿಗೋಷ್ಠಿ ನಡೆಸಿ ದರ್ಗಾ ಹಾಗೂ ವಕ್ಫ್ ಬೋರ್ಡ್ ಗೆ ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ.ಅವರ ಆಡಳಿತ ಅವಧಿಯಲ್ಲಿ ಒಂದೇ ಒಂದು ಸಾಮಾನ್ಯ ಸಭೆ ಕರೆಯಲಿಲ್ಲ, ಬಜೆಟ್ ಮಂಡನೆ ಮಾಡಲಿಲ್ಲ. ಏಳು ವರ್ಷ ಕಳೆದರೂ ಹೊಸ ಆಡಳಿತ ರಚನೆಗೆ ಯಾವುದೇ ಪ್ರಯತ್ನ ಮಾಡದೇ ಚುನಾವಣೆಯನ್ನು ಕಾನೂನಿಗೆ ವಿರುದ್ಧ ಎಂದು ಅಪಪ್ರಚಾರ ಮಾಡಿ ಜನರ ನಡುವೆ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಆರಂಭದಲ್ಲಿ ಚುನಾವಣೆ ಗೆ ಬೆಂಬಲ ನೀಡಿದ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಹಾಗೂ ಪದಾಧಿಕಾರಿಗಳು ಗುರುತಿನ ಚೀಟಿ ಮಾಡಿಸಿದ್ದಾರೆ. ದರ್ಗಾ ಕಟ್ಟಡದಲ್ಲೇ ಇದಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು.
ಅಲ್ಲದೆ ವಕ್ಫ್ ಬೋರ್ಡ್ ಚುನಾವಣೆ ಘೋಷಣೆ ಮಾಡಿ ಸದಸ್ಯತನಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಿತು. ಇದಕ್ಕೆ ವಿರುದ್ಧವಾಗಿ ಹೆಚ್ಚಿನ ಕಾಲಾವಕಾಶ ಕೋರಿ ನಿಕಟ ಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಬಳಗ ಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ವಕ್ಫ್ ಬೋರ್ಡ್ ನಿಯಮಾವಳಿ ಪರಿಶೀಲಿಸಿ ಅರ್ಜಿಯನ್ನು ತಿರಸ್ಕರಿಸಿತು.
ದರ್ಗಾ ಚುನಾವಣೆ ಸಂಬಂಧಿಸಿ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಮುಗಿದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಆದ ಬಳಿಕ ಅಬ್ದುಲ್ ಮಾಲೀಕ್ ತಕರಾರು ಎತ್ತಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಹೈಕೋರ್ಟ್ ಇದು ಚುನಾವಣೆ ನಡೆಯುವುದನ್ನು ತಡೆಯಲು ಮಾಡುವ ಪ್ರಯತ್ನ ಎಂದು ಮನಗಂಡು ತಕರಾರು ಅರ್ಜಿ ಯನ್ನು ತಳ್ಳಿ ಹಾಕಿದೆ . ಇದರ ಬಳಿಕ ಯು.ಬಿ.ಸಿದ್ದೀಕ್ ಎಂಬವರು ಚುನಾವಣೆ ನಡೆಸಲು ವಕ್ಫ್ ಬೋರ್ಡ್ ಗೆ ಅಧಿಕಾರ ಇಲ್ಲ. ಮೊದಲು ಸೆಲೆಕ್ಷನ್ ಗೆ ಅವಕಾಶ ನೀಡಬೇಕು. ಅಲ್ಲಿ ವಿವಾದ ಆದರೆ ಮಾತ್ರ ಚುನಾವಣೆ ನಡೆಸಬಹುದು ಎಂದು ಹೈಕೋರ್ಟ್ ನಲ್ಲಿ ಹಿರಿಯ ನ್ಯಾಯವಾದಿಯೊಬ್ಬರ ಮೂಲಕ ಅರ್ಜಿ ಸಲ್ಲಿಸಿ ಚುನಾವಣೆ ಯನ್ನು ತಡೆಯಲು ಕೋರಿದ್ದರು. ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿ ವಕ್ಫ್ ಬೋರ್ಡ್ ನಿಯಮದಂತೆ ಚುನಾವಣೆ ಮಾತ್ರ ಪರಿಹಾರ ಎಂದು ತಿಳಿಸಿತು ಎಂದರು.
ಅವರ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ದಿಂದ ಕೂಡಿತ್ತು. ನಮಗೆ ಅಧಿಕಾರ ಹಸ್ತಾಂತರ ನಡೆದ ದಿನದಂದು ಅಧ್ಯಕ್ಷ ಅಬ್ದುಲ್ ರಶೀದ್ ಅವರು ದರ್ಗಾ ದಿಂದ 100,500 ರೂ. ಹಣ ಹಿಡಿದು ಕೊಂಡು ಹೋದ ರಶೀದಿ ನಮ್ಮಲ್ಲಿ ಇದೆ ಇಷ್ಟೆಲ್ಲಾ ಅವ್ಯವಹಾರ ಮಾಡಿದ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಸಮಿತಿ ಸುದ್ದಿ ಗೋಷ್ಠಿ ಮೂಲಕ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ.ಇವರು ನೀಡಿದ ಹೇಳಿಕೆಗಳು ನ್ಯಾಯಾಂಗ ನಿಂದನೆ ಅಪರಾಧ ಆಗಿದೆ. ಇದರ ವಿರುದ್ಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅವರ ಅವ್ಯವಹಾರ ದ ಬಗ್ಗೆ ತನಿಖಾ ಸಂಸ್ಥೆ ಯಿಂದ ತನಿಖೆ ನಡೆಸುತ್ತೇವೆ ಎಂದರು.
2016 ರಲ್ಲಿ ವಕ್ಫ್ ಬೋರ್ಡ್ ಉಳ್ಳಾಲ ದರ್ಗಾಕ್ಕೆ ಆಡಳಿತಾಧಿಕಾರಿ ಯನ್ನು ನೇಮಕ ಆದೇಶ ಮಾಡಿತ್ತು.ಇದರ ವಿರುದ್ಧ ಯುಬಿ ಸಿದ್ದೀಕ್ ಎಂಬವರು ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು.ಈ ಮೂಲಕ ಅಬ್ದುಲ್ ರಶೀದ್ ಸಮಿತಿ ಅನಧಿಕೃತವಾಗಿ ಆಡಳಿತ ವನ್ನು ಕೈಗೆತ್ತಿಕೊಂಡು ತಮ್ಮ ಸಮಿತಿಯನ್ನು ಅನುಮೋದನೆ ಗೆ ವಕ್ಫ್ ಬೋರ್ಡ್ ಗೆ ಕಳುಹಿಸಿದ್ದರು.ಈ ಸಮಿತಿ ನಿರ್ಗಮಿಸುವ ವರೆಗೂ ಅನುಮೋದನೆ ಸಿಕ್ಕಿಲ್ಲ ಎಂದು ಹೇಳಿದರು.
2017 ರಲ್ಲಿ ಜಾರಿಗೆ ಬಂದ ವಕ್ಫ್ ನಿಯಮಾವಳಿ ಯು ನಿಯಮ 48 ರ ಪ್ರಕಾರ ಈ ನಿಯಮಾವಳಿ ಜಾರಿಗೆ ಬಂದು ಆರು ತಿಂಗಳ ಒಳಗೆ ಫಾರಂ 42 ರನ್ನು ಭರ್ತಿ ಮಾಡಿ ರಾಜ್ಯ ವಕ್ಫ್ ಬೋರ್ಡ್ ಗೆ ಸಲ್ಲಿಸಬೇಕಾಗಿತ್ತು. ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಸಮಿತಿ ಫಾರಂ 42 ಭರ್ತಿ ಮಾಡಿ ಸಲ್ಲಿಸುವ ಗೋಜಿಗೆ ಹೋಗದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಸುದ್ದಿ ಗೋಷ್ಠಿ ಯಲ್ಲಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಲ್ ಮುಕಚೇರಿ , ಉಪಾಧ್ಯಕ್ಷ ಯು.ಎಚ್.ಹಸೈನಾರ್, ಜೊತೆ ಕಾರ್ಯದರ್ಶಿ ಇಸಾಕ್, ಮುಸ್ತಫಾ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.