ಪಾಲಿ (ರಾಜಸ್ಥಾನ), ನ 24 (DaijiworldNews/DB): ಬೆನ್ನಿಗೆ ಚೂರಿ ಇರಿದವರು ಮುಖ್ಯಮಂತ್ರಿಯಾಗುವುದು ಅಸಾಧ್ಯ ಎಂಬುದಾಗಿ ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ವಿರುದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕನಿಷ್ಠ 10 ಶಾಸಕರ ಬೆಂಬಲವೂ ಸಚಿನ್ ಪೈಲಟ್ಗಿಲ್ಲ. ಅಂತಹವರನ್ನು ಮುಖ್ಯಮಂತ್ರಿ ಮಾಡಲು ಆಗುವುದಿಲ್ಲ. ಪಕ್ಷದ ವಿರುದ್ದ ಬಂಡಾಯ ಎದ್ದು, ಪಕ್ಷಕ್ಕೇ ದ್ರೋಹ ಮಾಡಿದರಲ್ಲದೆ, ಬೆನ್ನಿಗೆ ಚೂರಿ ಹಾಕಿದ ವ್ಯಕ್ತಿ ಅವರು. ಅಂತಹವರನ್ನು ಸಿಎಂ ಮಾಡುವುದು ಸಾಧ್ಯವಿಲ್ಲ ಎಂದು ಗುಡುಗಿದರು.
ತಮ್ಮ ಪಕ್ಷದ ಸರ್ಕಾರವನ್ನು ಸ್ವತಃ ಆ ಪಕ್ಷದ ಅಧ್ಯಕ್ಷರೇ ಉರುಳಿಸಲು ಯತ್ನಿಸದ ಪ್ರಕರಣ ಬಹುಶಃ ದೇಶದಲ್ಲೇ ಮೊದಲು. ಅವರು ಬಂಡಾಯವೆದ್ದ ವೇಳೆ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ನಾಯಕರು ಬೆಂಬಲ ಮತ್ತು ಹಣಕಾಸಿನ ನೆರವು ಒದಗಿಸಿದ್ದರು ಎಂದು ಗೆಹ್ಲೋಟ್ ಆರೋಪಿಸಿದರು.
2020ರಲ್ಲಿ ಸಚಿನ್ ಪೈಲಟ್ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ19 ಮಂದಿ ಶಾಸಕರೊಂದಿಗೆ ಬಂಡಾಯವೆದ್ದು, ದೆಹಲಿಯ ರೆಸಾರ್ಟ್ವೊಂದರಲ್ಲಿ ವಾಸ್ತವ್ಯ ಮಾಡಿದ್ದರು.