ನವದೆಹಲಿ, ನ 24 (DaijiworldNews/DB): ಸರ್ಕಾರ ಅನುಮತಿಸಿದ್ದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಸೇನೆ ಸಿದ್ದವಾಗಿದೆ ಎಂದ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ವಿಚಾರವಾಗಿ ಸೇನೆಯನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್ ಮಾಡಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬಾಲಿವುಡ್ ನಟಿ ರಿಚಾ ಚಡ್ಡಾ ಇದೀಗ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿ, ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದರು. ಅವರ ಈ ಹೇಳಿಕೆಯುಳ್ಳ ಟ್ವೀಟ್ನ್ನು ಹಂಚಿಕೊಂಡು ನಟಿ ರಿಚಾ ಚಡ್ಡಾ ಟ್ವೀಟ್ ಮಾಡಿ ಗಲ್ವಾನ್ ಹಾಯ್ ಎನ್ನುತ್ತಿದೆ ಎಂದು ಬರೆದುಕೊಂಡಿದ್ದರು. ನಟಿಯ ಈ ಪೋಸ್ಟ್ ಸೇನೆಗೆ ವಿರುದ್ದವಾಗಿದೆ ಎಂದು ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಟೀಕೆ, ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೋಸ್ಟ್ನ್ನು ಡಿಲೀಟ್ ಮಾಡಿರುವ ನಟಿ, ಬೇರೊಂದು ಟ್ವೀಟ್ ಹಾಕಿ ಕ್ಷಮೆ ಕೋರಿದ್ದಾರೆ.
ಈ ಪೋಸ್ಟ್ ಉದ್ದೇಶಪೂರ್ವಕವಾಗಿ ಮಾಡಿರುವುದಲ್ಲ. ಆ ಮೂರು ಪದಗಳಿಂದ ಯಾರಿಗಾದರೂ ನೋವು ಉಂಟಾಗಿದ್ದರೆ ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ಸೇನೆಯ ಬಗ್ಗೆ ನನಗೆ ಯಾವಾಗಲೂ ಗೌರವವಿದೆ. ನನ್ನ ಪೋಸ್ಟ್ನಿಂದ ಅವರಿಗೆ ನೋವಾದರೆ, ನನಗೂ ಅದರಿಂದ ದುಃಖವಾಗುತ್ತದೆ. ನನ್ನ ಅಜ್ಜ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಲ್ಲದೆ, ಮಾವ ಕೂಡಾ ಸೇನೆಯ ಭಾಗವಾಗಿದ್ದರು. ಸೇನೆಯೊಂದಿಗೆ ನನ್ನ ರಕ್ತ ಸಂಬಂಧಿಕರಿರುವುದರಿಂದ ಅವರನ್ನು ನೋಯಿಸುವ ಉದ್ದೇಶ ನನ್ನದಲ್ಲ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
2020ರ ಜೂನ್ನಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಪ್ರತಿದಾಳಿಯಲ್ಲಿ ಚೀನಾ ಸೈನಿಕರೂ ಸಾವನ್ನಪ್ಪಿದ್ದರು. ಆನಂತರ ಚೀನಾ ಮತ್ತು ಭಾರತ ಗಡಿಯಲ್ಲಿ ಯುದ್ದದ ಭೀತಿ ಉಂಟಾಗಿತ್ತು. ಭಾರತೀಯ ಸೇನೆಯ ಈ ವೀರ ಹೋರಾಟವನ್ನು ರಿಚಾ ಗೇಲಿ ಮಾಡಿರುವುದು ದೇಶಾದ್ಯಂತ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.