ಜೈಪುರ್, ನ 23 (DaijiworldNews/DB): ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಇಲ್ಲವಾದಲ್ಲಿ ಭಾರತ್ ಜೋಡೋ ಯಾತ್ರೆ ರಾಜಸ್ಥಾನ ಪ್ರವೇಶಕ್ಕೆ ಬಿಡುವುದಿಲ್ಲ ಎಂದು ಪ್ರಭಾವಿ ಗುರ್ಜಾರ್ ಸಮುದಾಯದ ಮುಖಂಡ ವಿಜಯ್ ಸಿಂಗ್ ಬೈನ್ಸ್ಲಾ ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ರಾಹುಲ್ ಗಾಂಧಿಯವರ ಯಾತ್ರೆಗೆ ಸಂಕಷ್ಟವೊಂದು ಎದುರಾಗಿದೆ.

ದೌಸಾದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಸಚಿನ್ ಪೈಲಟ್ ಅವರನ್ನು ಸಿಎಂ ಮಾಡಬೇಕೆಂಬುದು ನಮ್ಮ ಹಲವಾರು ಸಮಯಗಳ ಬೇಡಿಕೆ. ಇದೀಗ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಈ ಬೇಡಿಕೆಯನ್ನು ಮತ್ತೊಮ್ಮೆ ಕಾಂಗ್ರೆಸ್ ಹೈಕಮಾಂಡ್ಗೆ ನೆನಪಿಸುತ್ತಿದ್ದೇವೆ. ನಮ್ಮ ಬೇಡಿಕೆಗೆ ಒಪ್ಪದಿದ್ದಲ್ಲಿ ರಾಜಸ್ಥಾನಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಲು ಬಿಡುವುದಿಲ್ಲ ಎಂದಿದ್ದಾರೆ.
ಇನ್ನು ಗುರ್ಜಾರ್ ಸಮುದಾಯದ ಬಾಕಿ ಉಳಿದಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಗಮನ ಹರಿಸಬೇಕು. ನಮ್ಮ ಬೇಡಿಕೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪದೇ ಇದ್ದಲ್ಲಿ ಯಾತ್ರೆಯನ್ನು ತಡೆಯಲು ಬೇಕಾದ ಎಲ್ಲಾ ಸಿದ್ದತೆಗಳನ್ನು ಗುರ್ಜಾರ್ ಆರಕ್ಷಣ್ ಸಂಘರ್ಷ್ ಸಮಿತಿ ಇಂದಿನಿಂದಲೇ ಮಾಡುತ್ತಿದೆ ಎಂದವರು ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ ನಾಲ್ಕು ವರ್ಷ ಪೂರೈಸಿರುವ ಕಾಂಗ್ರೆಸ್ ಸರ್ಕಾರ, ಐದನೇ ವರ್ಷದಲ್ಲಿ ಪೈಲಟ್ ನೇತೃತ್ವದಲ್ಲಿ ಮುನ್ನಡೆಯಬೇಕು. ಈ ಬೇಡಿಕೆ ಈಡೇರಿದರೆ ಯಾತ್ರೆಯನ್ನು ನಾವು ಸ್ವಾಗತ ಮಾಡುವುದಾಗಿ ಹೇಳಿದರು.