ಮುಂಬೈ, ನ 23 (DaijiworldNews/DB): ಮಹಾರಾಷ್ಟ್ರದ ಒಂದೇ ಒಂದು ಹಳ್ಳಿಯೂ ಕರ್ನಾಟಕದ ಪಾಲಾಗುವುದಕ್ಕೆ ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠಿ ಭಾಷೆ ಮಾತನಾಡುವ ಜನರಿರುವ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲಾಗುವುದು. ಆದರೆ ನಮ್ಮ ರಾಜ್ಯದ ಯಾವೊಂದು ಹಳ್ಳಿಯೂ ಆ ರಾಜ್ಯಕ್ಕೆ ಹೋಗುವುದಿಲ್ಲ ಎಂದಿದ್ದಾರೆ.
ಬೆಳಗಾವಿ-ಕಾರವಾರ-ನಿಪ್ಪಾಣಿಯಲ್ಲಿ ಮರಾಠಿ ಭಾಷಿಕರು ಹಲವು ಸಂಖ್ಯೆಯಲ್ಲಿದ್ದಾರೆ. ಕರ್ನಾಟಕದ ಇನ್ನೂ ಕೆಲವು ಭಾಗಗಳಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಎಲ್ಲಾ ಭಾಗಗಳನ್ನು ನಮ್ಮ ರಾಜ್ಯಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದದ ನಡುವೆ ಮಹಾ ಡಿಸಿಎಂ ಅವರ ಈ ಹೇಳಿಕೆ ಬಂದಿದೆ. ಇದಕ್ಕೂ ಮೊದಲು ರಾಜ್ಯಗಳ ನಡುವೆ ಕಿಡಿ ಹಚ್ಚುವ ಕೆಲಸವನ್ನು ಮಹಾರಾಷ್ಟ್ರ ಸಿಎಂ ಮಾಡಬೇಡಿ ಎಂದು ಮಂಗಳವಾರ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿಯವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಎಚ್ಚರಿಕೆ ನೀಡಿದ್ದರು.