ಕಣ್ಣೂರು, ನ 23 (DaijiworldNews/DB): ಕಾಂಗ್ರೆಸ್ ಸಂಸದರಿಬ್ಬರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಪ್ರಮುಖರನ್ನು ಭೇಟಿ ಮಾಡುವುದು ಭಿನ್ನಮತೀಯ ಚಟುವಟಿಕೆ ಹೇಗಾಗುತ್ತದೆ ಎಂದು ಸಂಸದ ಶಶಿ ತರೂರ್ ಪ್ರಶ್ನಿಸಿದ್ದಾರೆ.

ಬಣ ರಾಜಕೀಯವನ್ನು ಪಕ್ಷ ಸಹಿಸುವುದಿಲ್ಲ, ಅಂತಹ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ವಿಪಕ್ಷ ನಾಯಕ ವಿ.ಡಿ. ಸತೀಶನ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ತಲಶ್ಶೇರಿ ಆರ್ಚ್ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ ಅವರನ್ನು ಭೇಟಿಯಾದ ನಂತರ ಕಣ್ಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ಕೆಲವು ಮಾಧ್ಯಮಗಳಲ್ಲಿ ನಾನು ಹಾಗೂ ರಾಘವನ್ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ವರದಿ ಮಾಡಲಾಗಿದೆ. ಮಾಧ್ಯಮಗಳು ಬಯಸಿದರೆ ಸೂಜಿ ನೀಡುತ್ತೇನೆ. ಆದರೆ ಸೂಜಿಯಿಂದ ಚುಚ್ಚಲು ನಾವು ಗಾಳಿ ತುಂಬಿದ ಬಲೂನುಗಳಲ್ಲ ಎಂದು ಕಿಡಿ ಕಾರಿದರು.
ಪಕ್ಷದ ನಿರ್ದೇಶನದ ವಿರುದ್ದ ನಾವು ಯಾವುದೇ ತಪ್ಪೆಸಗಿಲ್ಲ. ಆ ಬಗ್ಗೆ ಅನಗತ್ಯ ವಿವಾದ ಎಬ್ಬಿಸುತ್ತಿರುವುದು ದುರದೃಷ್ಟಕರ. ಸುಳ್ಳು ಸುದ್ದಿಗಳಿಂದ ನಮ್ಮಂತ ನಾಯಕರನ್ನು ನಾಶ ಮಾಡುವುದು ಅಸಾಧ್ಯ ಎಂದರು.
ಪ್ರತಿ ವಾರ ನಲ್ವತ್ತಕ್ಕೂ ಹೆಚ್ಚು ಆಹ್ವಾನ ಬರುತ್ತದೆ. ಅದರಲ್ಲಿ ಒಂದೆರಡರಲ್ಲಿ ಭಾಗವಹಿಸಿದರೆ ನಿಮಗದು ಭಿನ್ನಮತೀಯ ಚಟುವಟಟಿಕೆ ಎಂದು ತೋರುತ್ತಿದೆಯೇ? ಮಲಪ್ಪುರಂ ಕಾರ್ಯಕ್ರಮಕ್ಕೆ ರಾಘವನ್ ಸಲಹೆ ಮೇರೆಗೆ ಹೋಗಿದ್ದೆ. ಪಕ್ಷ ವಿರೋಧಿಯಾಗಿ ನಾವಿಬ್ಬರೂ ಕೆಲಸ ಮಾಡುತ್ತಿಲ್ಲ ಎಂದು ಇದೇ ವೇಳೆ ತರೂರ್ ಸ್ಪಷ್ಟಪಡಿಸಿದರು.
ಹದಿನಾಲ್ಕು ವರ್ಷಗಳ ರಾಜಕೀಯ ಜೀವನದಲ್ಲಿ ಇದುವರೆಗೆ ಯಾರೊಂದಿಗೂ ಭಿನ್ನಾಭಿಪ್ರಾಯ ಇರಿಸಿಕೊಂಡಿಲ್ಲ. ಯಾರಿಗೂ ಕೆಟ್ಟದಾಗಿ ಮಾತನಾಡಿಲ್ಲ ಎಂದರು.