ಪಾಟ್ನಾ, ಆ 05 (DaijiworldNews/MS): ಬಿಹಾರದಲ್ಲಿ ಶಂಕಿತ ಕಳ್ಳಭಟ್ಟಿ ದುರಂತ ಪ್ರಕರಣ ನಡೆದಿದ್ದು, ಕಳ್ಳಭಟ್ಟಿ ಮದ್ಯ ಸೇವಿಸಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದು, ಹಲವರು ಅಸ್ವಸ್ಥಗೊಂಡಿರುವ ಬಗ್ಗೆ ವರದಿಯಾಗಿದೆ.

ಸರನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ಮೀನಾ ಅವರ ಪ್ರಕಾರ, ಎಲ್ಲಾ ಪ್ರಕರಣಗಳು ಮೇಕರ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಿಂದ ವರದಿಯಾಗಿದ್ದು, ಪ್ರಾಥಮಿಕವಾಗಿ, ಗ್ರಾಮಸ್ಥರು ನಕಲಿ ಮದ್ಯ ಸೇವಿಸಿದ್ದಾರೆಂದು ತೋರುತ್ತಿದೆ. ಇಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎರಡು ಸಾವುಗಳು ಸಂಭವಿಸಿವೆ. ತೀವ್ರ ಅಸ್ವಸ್ಥರ ಪೈಕಿ 17ಕ್ಕೂ ಹೆಚ್ಚು ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆಯ ನಂತರ, ಸರನ್ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರು ಸಂತ್ರಸ್ತರನ್ನು ಸದರ್ ಆಸ್ಪತ್ರೆಯಲ್ಲಿ ಭೇಟಿಯಾಗಿ ಘಟನೆಯ ಬಗ್ಗೆ ಅಧಿಕಾರಿಗಳು ಗ್ರಾಮಸ್ಥರು ಮತ್ತು ಕುಟುಂಬಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಸರನ್ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ಶಂಕಿತ ಕಳ್ಳಭಟ್ಟಿ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು ಮೇಕರ್, ಮರ್ಹೌರಾ ಮತ್ತು ಭೆಲ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸುತ್ತಿದ್ದೇವೆ. ಕಾರ್ಯಾಚರಣೆ ಮುಗಿದ ನಂತರ ಬಂಧಿಸಿದವರ ಸಂಖ್ಯೆಯನ್ನು ಹೇಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.