ಉಡುಪಿ, ನ.25 (DaijiworldNews/PY): "ನಮ್ಮ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು ಆರ್ಎಸ್ಎಸ್ ಹಿನ್ನೆಲೆಯವರಲ್ಲ. ಇದು ಕೇವಲ ಊಹಾಪೋಹಗಳು" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದ.ಕ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಆರ್ಎಸ್ಎಸ್ ನಿಕಟವರ್ತಿ ವಿಚಾರದ ಬಗ್ಗೆ ಪ್ರತಿಕ್ರಿಸಿದ್ದು, ಮಂಜುನಾಥ ಭಂಡಾರಿ ಅವರು ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರು ಆರ್ಎಸ್ಎಸ್ ಹಿನ್ನೆಲೆಯವರಲ್ಲ. ಆರಂಭದಿಂದಲೂ ಅವರು ಎನ್ಎಸ್ಯುಐ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಯೂತ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ" ಎಂದಿದ್ದಾರೆ.
"ನಾನು ಆರ್ಎಸ್ಎಸ್ ಅನ್ನು ತಾಲಿಬಾನ್ ಜೊತೆ ಹೋಲಿಕೆ ಮಾಡಿದ್ದೆ ನಿಜ. ಆದರೆ ಎಲ್ಲಾ ವಿಷಯಗಳನ್ನೂ ತಾಲಿಬಾನ್ ಎಂದು ಹೋಲಿಕೆ ಮಾಡಿರಲಿಲ್ಲ. ಕೆಲವೊಂದು ವಿಚಾರಗಳಲ್ಲಿ ತಾಲಿಬಾನ್ ಜೊತೆ ಹೋಲಿಕೆ ಮಾಡಿದ್ದೆ" ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಬಗ್ಗೆ ಪ್ರತಿಕ್ರಿಯಿಸಿದ ಅವರು, "ದೇಶದ ಬೆಳವಣಿಗೆಗೆ ಆರ್ಎಸ್ಎಸ್ ಕೊಡುಗೆ ಏನು?. ಸ್ವತಂತ್ರ ಪೂರ್ವದಲ್ಲಿ ದೇಶಕ್ಕೆ ಆರ್ಎಸ್ಎಸ್ ಕೊಡುಗೆ ಏನು?. ಸ್ವಾತಂತ್ರ್ಯ ಬಂದ ಬಳಿಕ ದೇಶದ ಆರ್ಥಿಕ ಬೆಳವಣಿಗೆಗೆ ಅವರ ಕೊಡುಗೆ ಏನು?. ಆರ್ಎಸ್ಎಸ್ಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ನಂಬಿಕೆ ಇಲ್ಲ. ಆರ್ಎಸ್ಎಸ್ನವರು ಮನುವಾದ, ಶ್ರೇಣೀಕೃತ ಸಮಾಜದ ಪ್ರತಿಪಾದಕರು" ಎಂದು ಆರೋಪಿಸಿದ್ದಾರೆ.
"ಕಾಂಗ್ರೆಸ್ ಪಕ್ಷ ಜಾತ್ಯಾತೀತ ನಿಲುವಿಗೆ ಬದ್ಧವಾಗಿರುವ ಪಕ್ಷ. ಪರಿಷತ್ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಎಲ್ಲರಿಗೂ ನಾವು ಅವಕಾಶ ನೀಡಿದ್ದೇವೆ" ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ವದಂತಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಪ್ರಮೋದ್ ಅವರು ಬೆಂಗಳೂರಿನಲ್ಲಿ ನಡೆದ ಸದಸ್ಯತ್ವ ನೋಂದಣಿ ಸಭೆಯಲ್ಲಿ ಭಾಗವಹಿಸಿದ್ದರು. ಹಾನಗಲ್ ಉಪಚುನಾವಣೆಯಲ್ಲಿ ಪ್ರಚಾರದ ನೇತೃತ್ವ ವಹಿಸಿದ್ದರು. ಉಪಚುನಾವಣೆ ಕಾರ್ಯದಲ್ಲಿ 15 ದಿನ ಭಾಗವಹಿಸಿದ್ದರು. ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಸಹ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನನಗೆ ಇತ್ತೀಚಿನ ಬೆಳವಣಿಗೆ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ಪ್ರಮೋದ್ ಜೊತೆ ಸಮಾಲೋಚನೆ ಮಾಡುತ್ತೇನೆ" ಎಂದಿದ್ದಾರೆ.