ಬಂಟ್ವಾಳ, ಅ.13 (DaijiworldNews/HR): ಮಂಗಳವಾರ ಮಧ್ಯಾಹ್ನದ ಬಳಿಕ ಎಡೆಬಿಡದೆ ಧಾರಾಕಾರವಾಗಿ ಸುರಿದ ಮಳೆ ಅವಾಂತರಕ್ಕೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪ ನಿರ್ಮಾಣ ಹಂತದಲ್ಲಿದ್ದ ಎರಡಂತಸ್ತಿನ ಮನೆಯೊಂದು ಕುಸಿದು ಬಿದ್ದಿದ್ದು, ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದೆ.



ತಾಲೂಕಿನ ಕೆಲವೆಡೆ ಗುಡ್ಡ,ಕಂಪೌಂಡು ಜರಿದು ಬಿದ್ದು ಮನೆಗಳಿಗೆ ಹಾನಿಯಾಗಿರುವುದಲ್ಲದೆ ಕೆಲವೆಡೆ ತೋಟಗಳಲ್ಲಿ ನೀರು ನಿಂತು ಹಾನಿಯಾದ ಘಟನೆಗಳು ನಡೆದಿದ್ದು,ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಎಡಪದವು ನಿವಾಸಿ ರಂಜಿತ್ ಎಂಬವರು ಎರಡು ವರ್ಷದ ಹಿಂದೆ ಪೊಳಲಿಯ ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸಮೀಪದ ಮನೆ ನಿರ್ಮಾಣ ಆರಂಭಿಸಿದ್ದರು. ಎರಡು ಅಂತಸ್ತಿನ ಮನೆ ಇದಾಗಿದ್ದು ಕಾಮಗಾರಿ ಅಂತಿಮ ಹಂತದಲ್ಲಿತ್ತು. ಮಂಗಳವಾರ ಎಡೆಬಿಡದೆ ಸುರಿದ ಮಳೆಗೆ ಮನೆ ಸಂಪೂರ್ಣ ಕುಸಿದು ಧರಾಶಾಹಿಯಾಗಿದೆ. ಈ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಕುತೂಹಲಿಗರ ದಂಡು ಸ್ಥಳಕ್ಕಾಗಮಿಸುತ್ತಿತ್ತು.ಕರಿಯಂಗಳ ಗ್ರಾಂ.ಪಂ.ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಸಹಿತ ಕಂದಾಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು,ನಷ್ಟದ ಬಗ್ಗೆಯು ಅಂದಾಜಿಸಿದ್ದಾರೆ.
ಇನ್ನು ಮಳೆಯಿಂದಾಗಿ ತಾಲೂಕಿನ ವಿವಿದೆಡೆಯಲ್ಲು ಗುಡ್ಡ, ಕಂಪೌಂಡ್ ಗೋಡೆ ಕುಸಿದ ಬಗ್ಗೆಯು ವರದಿಯಾಗಿದೆ. ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಚಿತ್ರಾವತಿ ಎಂಬವರ ಮನೆಗೆ ಪಕ್ಕದ ಕಂಪೌಂಡ್ ಗೋಡೆ ಕುಸಿದು ಅವರ ಪಕ್ಕಾ ಮನೆಗೆ ಭಾಗಶ: ಹಾನೊಯಾಗಿದ್ದು,ಮನೆಮಂದಿಗೆ ಯಾವುದೇ ಅಪಾಯವಾಗಿಲ್ಲ, ಮುಂಜಾಗೃತಕ್ರಮವಾಗಿ ಮನೆಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಸಜೀಪನಡುಗ್ರಾಮದ ದೇರಾಜೆಯ ಬರೆ ಎಂಬಲ್ಲಿ ಸಂಜೀವ ಪೂಜಾರಿಯವರ ಮನೆ ಸಮೀಪದ ಗುಡ್ಡದ ಮಣ್ಣು ಜರಿದು ಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ, ಅನಂತಾಡಿಗ್ರಾಮದ ಬಾಕಿಲ ಎಂಬಲ್ಲಿ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಬಾಳೆಗಿಡಗಳು ಧರಾಶಾಹಿಯಾಗಿದೆ. ಆದರೆ ಮನೆಗೆ ಯಾವುದೇ ಹಾನಿಯಾಗಿಲ್ಲ, ಸರಪಾಡಿ ಗ್ರಾಮದ ಉಜರಾಡಿ ಎಂಬಲ್ಲಿ ಐತಪ್ಪ ಪೂಜಾರಿಯವರ ಮನೆ ಬಳಿ ತಡೆಗೋಡೆ ಕುಸಿದು ಬಿದ್ದಿದೆ. ಬಾಳ್ತಿಲಗ್ರಾಮದ ಸುಧೇಕಾರು ಎಂಬಲ್ಲಿ ಸೇಸಪ್ಪ ನಾಯ್ಕ ಅವರ ಮನೆ ಹಿಂಭಾಗದಲ್ಲಿ ಗುಡ್ಡ ಜರಿದು ಬಿದ್ದಿದೆ. ಅರಳಗ್ರಾಮದಲ್ಲಿ ಸುಂದರ ಅವರ ಮನೆಯ ಮೇಲೆ ಕಂಪೌಂಡ್ ಗೋಡೆ ಕುಸಿದು ಮನೆ ಭಾಗಶ: ಹಾನಿಯಾದರೆ, ಇದೇ ಗ್ರಾಮದ ಅಲ್ಮುಡೆ ಎಂಬಲ್ಲಿ ಚಂದ್ರಾವತಿ ಅವರ ಮನೆಯ ಕಂಪೌಂಡ್ ಗೋಡೆ ಕುಸಿದಿದೆ. ಇಲ್ಲಿನ ಗರುಡ ಮಹಾಕಾಳಿ ದೇವಸ್ಥಾನದ ಹಿಂಭಾಗದ ಕಂಪೌಂಡ್ ಕುಸಿದಿದೆ. ಅಮ್ಟಾಡಿ ಗ್ರಾಮದ ಮುಂಡೆಗುರಿ ಎಂಬಲ್ಲಿ ಜಾನಕಿ ಅವರ ಮನೆ ಮುಂಭಾಗದ ಶೀಟ್ ಮೇಲೆ ಕಂಪೌಂಡ್ ಕುಸಿದು ಹಾನಿಯಾಗಿದೆ. ಕೊಯಿಲ ಗ್ರಾಮದಲ್ಲಿ ಮೋಹನ್ ಎಂಬವರ ಮನೆಯ ಹಿಂಬದಿಯ ಛಾವಣಿ ಕುಸಿದು ಬಿದ್ದು ಹಾನಿಯಾಗಿದೆ. ಸಜೀಪಮೂಡಗ್ರಾಮದಲ್ಲಿ ಶಬೀರ್ ಅವರ ಮನೆ ಪಕ್ಕದ ತಡೆಗೋಡೆ ಕುಸಿದ ರವಿ ಎಂಬವರ ಮನೆಗೆ ಹಾನಿಯಾಗಿದೆ. ಆಯಾಯ ಗ್ರಾಮದ ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟದ ಬಗ್ಗೆ ಅಂದಾಜಿಸಿ,ತಹಶೀಲ್ದಾರರಿಗೆ ಕಳಿಸಿದ್ದಾರೆ.