ಮಂಗಳೂರು, ಮೇ 03 (DaijiworldNews/MB) : ಜಿಲ್ಲೆಯ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 40,000 ದಾಟಿದೆ. ಸೋಂಕಿನಿಂದ ವಿವಿಧ ವಯೋಮಾನದ ಜನರು ಚೇತರಿಸಿಕೊಂಡಿದ್ದಾರೆ. ಆದರೆ ರೋಗದಿಂದ ಮಕ್ಕಳು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ, ಕೊರೊನಾ ಸೋಂಕು ಜಿಲ್ಲೆಯಲ್ಲಿ ಹರಡಿದಾಗ ಆರೋಗ್ಯ ಇಲಾಖೆಯು ಹಿರಿಯರು, ಮಕ್ಕಳು, ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಮತ್ತು ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಿತ್ತು.ಬಳಿಕ, ಹಂತ ಹಂತವಾಗಿ ಲಾಕ್ಡೌನ್ ಹಿಂಪಡೆಯುವಾಗಲೂ ವಯಸ್ಸಾದ ಜನರು ಮತ್ತು ಮಕ್ಕಳು ಕಂಟೈನ್ಮೆಂಟ್ ಝೋನ್ಗೆ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗಿತ್ತು.
ಸಾಂಕ್ರಾಮಿಕ ರೋಗದ ಮೊದಲ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಒಟ್ಟು 622 ಮಕ್ಕಳಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಓರ್ವ ಹೆಣ್ಣು ಮಗು ಮತ್ತು ಇಬ್ಬರು ಗಂಡು ಮಕ್ಕಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಚೇತರಿಸಿಕೊಂಡಿದ್ದಾರೆ. 5 ರಿಂದ 10 ವರ್ಷದೊಳಗಿನ 797 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಎಲ್ಲಾ ಮಕ್ಕಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. 11 ರಿಂದ 15 ವಯೋಮಾನದ 1,015 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಓರ್ವ ಬಾಲಕನ್ನು ಹೊರತುಪಡಿಸಿ ಉಳಿದೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಹೆಚ್ಚಿನ ಸಾವುಗಳು 61-70 ವಯಸ್ಸಿನವರಲ್ಲಿ ಸಂಭವಿಸಿವೆ. ಈ ಗುಂಪಿಗೆ ಸೇರಿದ 233 ಜನರು ಸಾವನ್ನಪ್ಪಿದ್ದಾರೆ. 71 ರಿಂದ 80 ವರ್ಷದೊಳಗಿನ ಒಟ್ಟು 166 ಜನರು ಕೂಡಾ ಸಾವನ್ನಪ್ಪಿದ್ದಾರೆ. ನಾವು ಈ ಸಾವುಗಳ ಲಿಂಗವಾರು ಪರಿಗನಣೆಗೆ ತೆಗೆದುಕೊಂಡಾಗ ಪುರುಷರ ಸಾವು ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ಶುಕ್ರವಾರದವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಇದುವರೆಗೆ 757 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಪೈಕಿ 226 ಮಹಿಳೆಯರಾದರೆ, 531 ಪುರುಷರಾಗಿದ್ದಾರೆ.
ಎರಡನೇ ಅಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳು ಹೆಚ್ಚು ಸುರಕ್ಷಿತರಾಗಿದ್ದಾರೆ. 16 ಮತ್ತು 30 ವರ್ಷದೊಳಗಿನ ಅನೇಕರು ಸೋಂಕಿಗೆ ತುತ್ತಾಗಿದ್ದಾರೆ. ಪಿಯು ತರಗತಿಗಳು ನಡೆಯುತ್ತಿರುವಾಗ, ಒಬ್ಬ ವಿದ್ಯಾರ್ಥಿಗೆ ಸೋಂಕು ತಗುಲಿದೆಯೆಂದು ಗಮನಿಸಿದ ನಂತರ, ಎಲ್ಲರನ್ನು ಪರೀಕ್ಷಿಸಲಾಯಿತು. ಆರಂಭಿಕ ಹಂತದಲ್ಲಿ ಹಲವಾರು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಅವರು ಪ್ರತ್ಯೇಕವಾಗಿರಲು ಕೇಳಿಕೊಂಡರೂ ಸಹ ಅವರು ಪ್ರತ್ಯೇಕವಾಗಿರದೆ ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿದ್ದಾರೆ. ಈ ಮೂಲಕ ಸೋಂಕನ್ನು ಇತರರಿಗೆ ಮತ್ತು ತಮ್ಮ ಕುಟುಂಬದ ಹಿರಿಯರಿಗೆ ಹರಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
"ಮಧ್ಯವಯಸ್ಕ ಸೋಂಕಿತ ಜನರಲ್ಲಿ ಆರೋಗ್ಯದ ತೊಂದರೆಗಳು ಹೆಚ್ಚಾಗಿ ಕಂಡು ಬಂದಿದೆ. ಇದು ಆಸ್ಪತ್ರೆಗಳಿಗೆ ತಡವಾಗಿ ಬಂದ ಕಾರಣದಿಂದಾಗಿರಬಹುದು. ಆದ್ದರಿಂದ ನಾವು ಮಕ್ಕಳಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದಾಗ, ಹೆಚ್ಚು ಕಾಳಜಿ ವಹಿಸುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.