ಉಡುಪಿ, ಮೇ.02 (DaijiworldNews/PY): ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರು ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ.
ಜಿಲ್ಲಾಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಶನಿವಾರ ಮುಂಜಾನೆ ವೇಳೆಗೆ ಹಿರಿಯ ನಾಗರಿಕರು ಸೇರಿದಂತೆ 45 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಟೋಕನ್ಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂದಿದೆ. ಟೋಕನ್ ವಿತರಿಸುವ ಸಮಯವನ್ನು ಸರಿಯಾಗಿ ತಿಳಿಸದ ಹಿನ್ನೆಲೆ ಬೆಳಗ್ಗೆ 6 ಗಂಟೆಗೆ ಬಂದವರು ಟೋಕನ್ ಪಡೆಯುವಾಗ 9 ಗಂಟೆ ಕಳೆದಿತ್ತು.
ಲಸಿಕೆ ಕೇಂದ್ರದಲ್ಲಿ ಏಕಕಾಲದಲ್ಲಿ ಜನದಟ್ಟಣೆಯನ್ನು ತಡೆಯುವ ಸಲುವಾಗಿ ಕಳೆದೆರಡು ದಿನಗಳಿಂದ ಸುಮಾರು 200ರಂತೆ ಟೋಕನ್ ಸಂಖ್ಯೆ ಆಧಾರದಲ್ಲಿ ಲಸಿಕೆ ನೀಡಲಾಗುತ್ತಿದೆ. ಬಳಿಕ ಬಂದವರು ಖಾಲಿ ಕೈಯಲ್ಲಿ ಹಿಂದಿರುಗಬೇಕಾದ ಹಿನ್ನೆಲೆ ಸಾರ್ವಜನಿಕರು ಲಸಿಕಾ ಕೇಂದ್ರ ತೆರೆಯುವ ಮುನ್ನವೇ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಲಸಿಕಾ ಕೇಂದ್ರದಲ್ಲಿ ಏಕಕಾಲಕ್ಕೆ 30 ಜನರಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿದ್ದು, ಉಳಿದವರು ಟೋಕನ್ ಪಡೆಯಲು ನಿಂತುಕೊಳ್ಳಬೇಕಾಗಿದೆ.
ಇಲ್ಲಿಯೂ ಕೂಡಾ ಸಾಮಾಜಿಕ ಅಂತರವಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಅಲ್ಲದೇ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಾಹಿತಿ ಕೊರತೆಯೂ ಕಾಡುತ್ತಿದೆ ಎಂದು ಹಿರಿಯ ನಾಗರಿಕರು ಆರೋಪಿಸಿದ್ದಾರೆ.