ಮಂಗಳೂರು : 'ಪ್ರಾಣಿಗಳಿಗೆ ರಕ್ಷಣೆ ನೀಡಲಾಗದಿದ್ರೆ, ಮೃಗಾಲಯ ಮುಚ್ಚಿಬಿಡಿ' - ಕೋರ್ಟ್ ಖಡಕ್ ಎಚ್ಚರಿಕೆ
Mon, Feb 02 2026 01:50:39 PM
ಮಂಗಳೂರು, ಫೆ. 02 (DaijiworldNews/TA): ನಗರದ ಹೆಮ್ಮೆಯ ಪಿಲಿಕುಳ ಮೃಗಾಲಯಕ್ಕೆ ಈಗ ಭಾರೀ ಸಂಕಷ್ಟ ಎದುರಾಗಿದೆ. ಅವ್ಯವಸ್ಥೆ, ನಿರ್ಲಕ್ಷ್ಯ, ಮತ್ತು ಮೂಕ ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಪೀಠವೇ ಶಾಕ್ ಆಗಿದೆ. ಪ್ರಾಣಿಗಳನ್ನ ಸರಿಯಾಗಿ ನೋಡಿಕೊಳ್ಳಲು ಆಗದಿದ್ರೆ ಮೃಗಾಲಯವನ್ನ ಬಂದ್ ಮಾಡಿ” ಅಂತಾ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ ನ್ಯಾಯಾಲಯ.
ಅರಬ್ಬೀ ಸಮುದ್ರದ ತಡಿಯ ಮಂಗಳೂರು. ಇಲ್ಲಿನ ಪಿಲಿಕುಳ ಅಂದ್ರೆ ಕೇವಲ ಮೃಗಾಲಯವಲ್ಲ. ತುಳುನಾಡಿನ ಹಸಿರು ಗೌರವ. ಸುಮಾರು 370 ಎಕರೆ ವಿಸ್ತೀರ್ಣದಲ್ಲಿ ಹಬ್ಬಿರೋ ಈ ಜೈವಿಕ ಉದ್ಯಾನವನ, ದೇಶದ ಅತ್ಯಂತ ನೈಸರ್ಗಿಕ ಮೃಗಾಲಯಗಳಲ್ಲಿ ಒಂದೆಂಬ ಖ್ಯಾತಿ ಪಡೆದಿತ್ತು. ‘ಪಿಲಿ’ ಅಂದ್ರೆ ಹುಲಿ. ‘ಕುಳ’ ಅಂದ್ರೆ ಕೆರೆ. ಒಂದು ಕಾಲದಲ್ಲಿ ಹುಲಿಗಳು ನೀರು ಕುಡಿಯುತ್ತಿದ್ದ ಈ ನೆಲ, ಇಂದು ಅಂತರಾಷ್ಟ್ರೀಯ ಮಟ್ಟದ ಜೈವಿಕ ಉದ್ಯಾನವನವಾಗಿ ರೂಪುಗೊಂಡಿತ್ತು. ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರೋ ವನ್ಯಜೀವಿಗಳಿಗೆ ಆಶ್ರಯ ನೀಡುತ್ತಿದ್ದ ಈ ಪಿಲಿಕುಳ, ಕರಾವಳಿ ಪ್ರವಾಸಿಗರ ಮೊದಲ ಆಯ್ಕೆ ಕೂಡ ಆಗಿತ್ತು. ಆದ್ರೆ, ಇಂದು ಅದೇ ಪಿಲಿಕುಳ ಅವ್ಯವಸ್ಥೆಯ ಅಡಿಗಲ್ಲಾಗಿ ಮಾರ್ಪಟ್ಟಿದೆ.
ಮಂಗಳೂರಿನ ಪ್ರವಾಸಿಗರ ಹಾಟ್ ಫೇವರೆಟ್ ಪಿಲಿಕುಳ ಮೃಗಾಲಯದ ಸ್ಥಿತಿ, ಇಷ್ಟು ಗಂಭೀರವಾಗಿದೆ ಅಂದ್ರೆ ಅದನ್ನ ನೋಡಿ ಹೈಕೋರ್ಟ್ ನ್ಯಾಯಾಧೀಶರೇ ಬೆಚ್ಚಿಬಿದ್ದಿದ್ದಾರೆ. ಇಲ್ಲಿರೋ ಮೂಕ ಪ್ರಾಣಿಗಳ ತಪ್ಪಲ್ಲ. ಇದು ಆಡಳಿತ ವ್ಯವಸ್ಥೆಯ ಸ್ವಯಂ ಕೃತ ಅಪರಾಧ. ತುಕ್ಕು ಹಿಡಿದ ಪಂಜರಗಳು. ಕಲುಷಿತ ನೀರು, ಅಶುಚಿಯಾದ ವಾತಾವರಣ, ಪಿಲಿಕುಳ ಮೃಗಾಲಯದ ಸದ್ಯದ ನಿಜ ಸ್ಥಿತಿ ಇದು.
ಇನ್ನೂ ವನ್ಯಜೀವಿ ಸಂರಕ್ಷಕ ಭುವನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ಪಿಲಿಕುಳ ಮೃಗಾಲಯದ ಅಸಲಿ ಚಿತ್ರಣ ಹೈಕೋರ್ಟ್ ಮುಂದೆ ಬಯಲಾಗಿದೆ. ಪ್ರಾಣಿಗಳನ್ನು ಇರಿಸಿರುವ ಪಂಜರಗಳು ಸಂಪೂರ್ಣ ತುಕ್ಕು ಹಿಡಿದಿವೆ. ಸರಿಯಾದ ಭದ್ರತೆ ಇಲ್ಲ. ಅಶುಚಿಯಾದ ಪರಿಸರದಲ್ಲಿ ಪ್ರಾಣಿಗಳು ನರಳುತ್ತಿರುವ ಫೋಟೋಗಳನ್ನು ನೋಡಿ ನ್ಯಾಯಪೀಠವೇ ಕೆಂಡಾಮಂಡಲವಾಗಿದೆ. ಪಿಲಿಕುಳದಲ್ಲಿ ಪ್ರಾಣಿಗಳನ್ನ ನಿರ್ಲಕ್ಷ್ಯ ಮಾಡಲಾಗ್ತಿದೆ. ತುಕ್ಕು ಹಿಡಿದ ಪಂಜರಗಳು ಅಪಾಯಕಾರಿಯಾಗಿವೆ. ಕಲುಷಿತ ನೀರು, ಸರಿಯಾದ ಚಿಕಿತ್ಸೆ ಇಲ್ಲ. ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿವೆ.” ಇದಕ್ಕಿಂತ ದೊಡ್ಡ ದುರಂತ ಏನಂದ್ರೆ ಜನಮನ್ನಣೆ ಪಡೆದ ಈ ಪಿಲಿಕುಳ ಮೃಗಾಲಯದ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೇ ಮುಕ್ತಾಯವಾಗಿದೆ. ಅಂದರೆ ಸದ್ಯ ಯಾವುದೇ ಮಾನ್ಯ ಪರವಾನಗಿ ಇಲ್ಲದೇ ಮೃಗಾಲಯ ಕಾರ್ಯಾಚರಿಸುತ್ತಿದೆ. ಈ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ – CZA, 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ರೂ, ಅಧಿಕಾರಿಗಳು ಮಾತ್ರ ಕಿವಿಗೊಡಲೇ ಇಲ್ಲ ಅನ್ನೋ ಆರೋಪ.
CZA ನೋಟಿಸ್ ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಲಿನ ನೀರು ಕುಡಿಯುತ್ತಾ, ಚಿಕಿತ್ಸೆ ಸಿಗದೇ ಪ್ರಾಣಿಗಳು ನರಳುತ್ತಿವೆ. ಇದು ಗಂಭೀರ ಅಪರಾಧ. ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಲೈಸೆನ್ಸ್ ವಿಸ್ತರಣೆಗೆ ಅರ್ಜಿ ಸಲ್ಲಿಸಲಾಗಿದೆ, ಅದು ಪರಿಶೀಲನೆಯಲ್ಲಿದೆ ಎಂದು ಸಮರ್ಥನೆ ನೀಡಿದ್ರು. ಆದ್ರೆ ನ್ಯಾಯಾಲಯ ಮಾತ್ರ ಇದನ್ನ ಒಪ್ಪಲೇ ಇಲ್ಲ. "ಪ್ರಾಣಿಗಳಿಗೆ ರಕ್ಷಣೆ ನೀಡಲಾಗದಿದ್ರೆ, ಮೃಗಾಲಯವನ್ನ ಮುಚ್ಚಿಬಿಡಿ" ಅಂತಾ ಸರ್ಕಾರಕ್ಕೆ ಕಟು ಎಚ್ಚರಿಕೆ ನೀಡಿದೆ.
ಒಟ್ಟಿನಲ್ಲಿ ಫೆಬ್ರವರಿ 5ಕ್ಕೆ ವಿಚಾರಣೆ ಮುಂದೂಡಿಕೆಯಾಗಿದ್ದು, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಈಗ ಅಕ್ಷರಶಃ ನಡುಗಿ ಹೋಗಿದೆ. ತುಳುನಾಡಿನ ಹೆಮ್ಮೆಯ ಪಿಲಿಕುಳ ಮೃಗಾಲಯದ ಮುಂದಿನ ಭವಿಷ್ಯ ಏನು? ಮೂಕ ಪ್ರಾಣಿಗಳಿಗೆ ನ್ಯಾಯ ಸಿಗುತ್ತಾ? ಅಥವಾ ಮೃಗಾಲಯವೇ ಬಂದ್ ಆಗುತ್ತಾ ಇದನ್ನ ಕಾದುನೋಡಬೇಕಿದೆ.