Karavali
ಮಂಗಳೂರು: ಬಾಯಿ ಕ್ಯಾನ್ಸರ್ಗೆ ಧೂಮಪಾನ ಮತ್ತು ಮದ್ಯಪಾನಕ್ಕಿಂತ ಗುಟ್ಕಾ ಹೆಚ್ಚು ಅಪಾಯಕಾರಿ ಏಕೆ?
- Thu, Jan 15 2026 11:03:38 AM
-
ಮಂಗಳೂರು, ಜ. 15 (DaijiworldNews/AA): ಕ್ಯಾನ್ಸರ್ ಎಂಬುದು ಈಗ ಕೇವಲ ವಯಸ್ಸಾದವರಿಗೆ ಅಥವಾ ಅಪರೂಪದ ಕಾಯಿಲೆಗಳಿಗೆ ಸೀಮಿತವಾದ ಪದವಾಗಿ ಉಳಿದಿಲ್ಲ. ಇದು ನಮ್ಮ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳ ಮೇಲೆ ಸದ್ದಿಲ್ಲದೆ ಪರಿಣಾಮ ಬೀರುತ್ತಿದೆ. ಇಂದು ಭಾರತದಲ್ಲಿ ಕಂಡುಬರುವ ಎಲ್ಲಾ ರೀತಿಯ ಕ್ಯಾನ್ಸರ್ಗಳಲ್ಲಿ, 'ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್' ಅತ್ಯಂತ ಆತಂಕಕಾರಿಯಾಗಿದ್ದು, ಆರೋಗ್ಯದ ನಿರ್ಲಕ್ಷ್ಯದಿಂದ ಉಂಟಾಗುವ ಕ್ಯಾನ್ಸರ್ ಆಗಿದೆ.


ದುರದೃಷ್ಟವಶಾತ್, ಭಾರತವು ಇಂದು ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ಗಳ 'ಜಾಗತಿಕ ರಾಜಧಾನಿ' ಎಂಬ ಬಿರುದನ್ನು ಪಡೆದುಕೊಂಡಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು ಎರಡು ಲಕ್ಷ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಭಾರತಕ್ಕೆ ಹೋಲಿಸಿದರೆ, ಅಮೆರಿಕಾದಲ್ಲಿ ವಾರ್ಷಿಕವಾಗಿ ಸುಮಾರು 60,000 ಪ್ರಕರಣಗಳು ಮಾತ್ರ ದಾಖಲಾಗುತ್ತವೆ. ಆತಂಕಕಾರಿ ವಿಚಾರವೆಂದರೆ, ಭಾರತದ ಶೇಕಡಾ 80 ರಷ್ಟು ರೋಗಿಗಳು ಮೂರನೇ ಅಥವಾ ನಾಲ್ಕನೇ ಹಂತದಂತಹ ಮುಂದುವರಿದ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಅಂತಹ ರೋಗಿಗಳು ಗುಣಮುಖರಾಗುವ ಸಾಧ್ಯತೆಯು ಕಡಿಮೆಯಾಗಿದೆ.
ಹೀಗಾಗಿ, ದಾಯ್ಜಿವರ್ಲ್ಡ್ ಸಂಸ್ಥೆಯು ಎಂ.ಐ.ಒ ಆಸ್ಪತ್ರೆ ಮತ್ತು ಹಿರಿಯ ಕ್ಯಾನ್ಸರ್ ತಜ್ಞರಾದ ಡಾ. ಸುರೇಶ್ ರಾವ್ ಅವರ ಸಹಯೋಗದೊಂದಿಗೆ 'ಕ್ಯಾನ್ಸರ್ ಗೆಲ್ಲೋಣ' ಎಂಬ ಸಾರ್ವಜನಿಕ ಸೇವಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮವನ್ನು ಸಮಾಜದಲ್ಲಿ ಜಾಗೃತಿ ಮೂಡಿಸಲು, ಆರಂಭಿಕ ಹಂತದಲ್ಲೇ ರೋಗ ಪತ್ತೆಹಚ್ಚಲು ಉತ್ತೇಜನ ನೀಡಲು ಮತ್ತು ಪ್ರಾಣ ಉಳಿಸುವ ಉದ್ದೇಶದಿಂದ ರೂಪಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ, ಈ ಕಾರ್ಯಕ್ರಮವು ಹಲವಾರು ವೀಕ್ಷಕರಿಗೆ ಆರಂಭಿಕ ಲಕ್ಷಣಗಳನ್ನು ಗುರುತಿಸಲು ಮತ್ತು ಸಮಯೋಚಿತ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಹಾಯ ಮಾಡಿದೆ.
ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಎಂದರೇನು?
ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಎಂಬುದು ಕೇವಲ ಒಂದು ಕಾಯಿಲೆಯಲ್ಲ. ಇದು ಬಾಯಿ, ಗಂಟಲು, ಧ್ವನಿಪೆಟ್ಟಿಗೆ, ನಾಲಿಗೆ, ಗಂಟಲ ಗ್ರಂಥಿ ಮತ್ತು ಮೂಗಿನ ಹೊಳ್ಳೆಗಳಂತಹ ವಿವಿಧ ಭಾಗಗಳಲ್ಲಿ ಸಂಭವಿಸುವ ಕ್ಯಾನ್ಸರ್ಗಳ ಸಮೂಹವಾಗಿದೆ. ನಾವು ಉಸಿರಾಡುವ, ಅಗಿಯುವ ಅಥವಾ ನುಂಗುವ ಹಾನಿಕಾರಕ ಪದಾರ್ಥಗಳಿಗೆ ಈ ಅಂಗಗಳು ನಿರಂತರವಾಗಿ ಒಡ್ಡಿಕೊಳ್ಳುವುದರಿಂದ, ಇವು ಕ್ಯಾನ್ಸರ್ ಕಾರಕಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇವುಗಳಲ್ಲಿ ಬಾಯಿ ಮತ್ತು ಗಂಟಲಿನ ಒಳಪದರದಿಂದ ಉಂಟಾಗುವ 'ಸ್ಕ್ವಾಮಸ್ ಸೆಲ್ ಕಾರ್ಸಿನೋಮ' ಅತ್ಯಂತ ಸಾಮಾನ್ಯ ವಿಧವಾಗಿದೆ.ಯಾವುದೇ ರೂಪದ ತಂಬಾಕು ಬಳಕೆ, ಅತಿಯಾದ ಮದ್ಯಪಾನ, ಹೆಚ್.ಪಿ.ವಿ ಮತ್ತು ಎಪ್ಸ್ಟೀನ್-ಬಾರ್ ವೈರಸ್ನಂತಹ ಸೋಂಕುಗಳು, ಬಾಯಿಯ ಅಶುಚಿತ್ವ ಮತ್ತು ಹರಿತವಾದ ಅಥವಾ ಮುರಿದ ಹಲ್ಲುಗಳು, ಪೌಷ್ಟಿಕಾಂಶದ ಕೊರತೆಯು ಈ ಕ್ಯಾನ್ಸರ್ಗೆ ಪ್ರಮುಖ ಕಾರಣಗಳಾಗಿವೆ.
ಈ ಕಾರಣಗಳ ಪೈಕಿ ತಂಬಾಕು ಕ್ಯಾನ್ಸರ್ಗೆ ಅತ್ಯಂತ ದೊಡ್ಡ ಶತ್ರುವಾಗಿದೆ. ಕೇವಲ ಮೂರು ವರ್ಷಗಳ ಕಾಲ ನಿಯಮಿತವಾಗಿ ತಂಬಾಕು ಬಳಸಿದರೂ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಗುಟ್ಕಾ, ಪಾನ್ ಮಸಾಲಾ ಮತ್ತು ಅಂತಹ ಅಗಿಯುವ ಉತ್ಪನ್ನಗಳು ಹೆಚ್ಚು ಅಪಾಯಕಾರಿ. ಏಕೆಂದರೆ ಇವುಗಳಲ್ಲಿ ವ್ಯಸನಕಾರಿಯಾದ ನಿಕೋಟಿನ್ ಮತ್ತು ಕ್ಯಾನ್ಸರ್ ಕಾರಕ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ.
ಕೇವಲ ಮದ್ಯಪಾನವು ನೇರವಾಗಿ ಕ್ಯಾನ್ಸರ್ಗೆ ಕಾರಣವಾಗದಿರಬಹುದು, ಆದರೆ ಅದನ್ನು ತಂಬಾಕಿನೊಂದಿಗೆ ಸೇರಿಸಿ ಸೇವಿಸಿದಾಗ ಕ್ಯಾನ್ಸರ್ ಬರುವ ಅಪಾಯ ಸುಮಾರು 40 ಪಟ್ಟು ಹೆಚ್ಚಾಗುತ್ತದೆ. ದುರದೃಷ್ಟವಶಾತ್, ಅನೇಕ ಯುವಕರು ಈ ಅಭ್ಯಾಸಗಳನ್ನು ಪ್ರತಿಷ್ಠೆಯ ಸಂಕೇತ ಎಂದು ಭಾವಿಸುತ್ತಾರೆ. ಇಂತಹ ಉತ್ಪನ್ನಗಳನ್ನು ಪ್ರಚಾರ ಮಾಡುವ ಸೆಲೆಬ್ರಿಟಿಗಳಿಂದ ಪ್ರಭಾವಿತರಾಗಿ, ತಮ್ಮ ದೇಹಕ್ಕೆ ಉಂಟಾಗುತ್ತಿರುವ ದೀರ್ಘಕಾಲದ ಹಾನಿಯನ್ನು ಅರಿಯದೆ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ.
ಎಂದಿಗೂ ನಿರ್ಲಕ್ಷಿಸಬಾರದ ಆರಂಭಿಕ ಮುನ್ನೆಚ್ಚರಿಕಾ ಲಕ್ಷಣಗಳು
ಭಾರತದಲ್ಲಿ ಕ್ಯಾನ್ಸರ್ ನಿಂದ ಉಂಟಾಗುವ ಸಾವಿನ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ರೋಗವು ತಡವಾಗಿ ಪತ್ತೆಯಾಗುವುದು. ಅನೇಕ ಜನರು ಆರಂಭಿಕ ಲಕ್ಷಣಗಳನ್ನು ತಾವಾಗಿಯೇ ಗುಣವಾಗಬಹುದು ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ, ನಾವು ಗಮನ ಹರಿಸಿದರೆ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಸ್ಪಷ್ಟವಾದ ಮುನ್ನೆಚ್ಚರಿಕಾ ಲಕ್ಷಣಗಳನ್ನು ನೀಡುತ್ತದೆ.ಗಮನಿಸಬೇಕಾದ ಪ್ರಮುಖ ಲಕ್ಷಣಗಳು:
ಎರಡು ವಾರಗಳಾದರೂ ಗುಣವಾಗದ ಬಾಯಿ ಹುಣ್ಣು.
ಬಾಯಿಯ ಒಳಭಾಗದಲ್ಲಿ ಬಿಳಿ ಅಥವಾ ಕೆಂಪು ಕಲೆಗಳು ಕಾಣಿಸಿಕೊಳ್ಳುವುದು.
ನಿರಂತರವಾದ ಗಂಟಲು ನೋವು.
ಆಹಾರ ನುಂಗುವಾಗ ತೊಂದರೆ ಅಥವಾ ನೋವು.
ಧ್ವನಿಯಲ್ಲಿ ಬದಲಾವಣೆ ಅಥವಾ ಒರಟುತನ.
ಕುತ್ತಿಗೆಯ ಭಾಗದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು.
ಯಾವುದೇ ಸೋಂಕು ಇಲ್ಲದಿದ್ದರೂ ಕಿವಿ ನೋವು ಕಾಣಿಸಿಕೊಳ್ಳುವುದು.
ರುಚಿಯಲ್ಲಿ ಅಸಹಜ ಬದಲಾವಣೆಗಳು.ಕುತ್ತಿಗೆಯಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಕ್ಯಾನ್ಸರ್ ಈಗಾಗಲೇ 'ಲಿಂಫ್ ನೋಡ್'ಗಳಿಗೆ ಹರಡಿದೆ ಎಂಬುದರ ಸಂಕೇತವಾಗಿದೆ ಮತ್ತು ಇದು ರೋಗದ ಮುಂದುವರಿದ ಹಂತವನ್ನು ಸೂಚಿಸುತ್ತದೆ. ಆದ್ದರಿಂದಲೇ, ಕಾಲಕಾಲಕ್ಕೆ ಬಾಯಿಯ ಸ್ವಯಂ-ಪರೀಕ್ಷೆ, ದಂತ ವೈದ್ಯರ ಬಳಿ ತಪಾಸಣೆ ಮತ್ತು ಲಕ್ಷಣಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅವಶ್ಯಕವಾಗಿದೆ.
ರೋಗ ಪತ್ತೆ ಮತ್ತು ಚಿಕಿತ್ಸೆ
ಕ್ಯಾನ್ಸರ್ ಇರುವ ಬಗ್ಗೆ ಶಂಕೆ ವ್ಯಕ್ತವಾದಾಗ, ವೈದ್ಯರು ಮೊದಲಿಗೆ ಬಯಾಪ್ಸಿ ಪರೀಕ್ಷೆ ಮಾಡುತ್ತಾರೆ. ಇದರಲ್ಲಿ ಪೀಡಿತ ಅಂಗದ ಸಣ್ಣ ಅಂಗಾಂಶದ ಮಾದರಿಯನ್ನು ತೆಗೆದುಕೊಂಡು ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಕ್ಯಾನ್ಸರ್ ಇರುವುದು ದೃಢಪಟ್ಟರೆ, ರೋಗವು ಯಾವ ಹಂತದಲ್ಲಿದೆ ಎಂದು ತಿಳಿಯಲು ಸಿಟಿ, ಎಂಆರ್ಐ ಅಥವಾ ಪಿಇಟಿ ಸ್ಕ್ಯಾನ್ಗಳನ್ನು ಮಾಡಲಾಗುತ್ತದೆ.ಆರಂಭಿಕ ಹಂತದ ಕ್ಯಾನ್ಸರ್ಗಳನ್ನು ಶಸ್ತ್ರಚಿಕಿತ್ಸೆ ಅಥವಾ ವಿಕಿರಣ ಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದು. ವಿಶೇಷವಾಗಿ ಧ್ವನಿಪೆಟ್ಟಿಗೆಯ ಕೆಲವು ಕ್ಯಾನ್ಸರ್ಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ ಶೇ. 100 ರಷ್ಟು ಗುಣಪಡಿಸಲು ಸಾಧ್ಯವಿದೆ. ಆದರೆ, ರೋಗವು ಮುಂದುವರಿದ ಹಂತ ತಲುಪಿದಾಗ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿಗಳ ಸಂಯೋಜಿತ ಚಿಕಿತ್ಸೆಯ ಅಗತ್ಯವಿರುತ್ತದೆ. ಈ ಹಂತದಲ್ಲಿ ರೋಗಿಯು ಬದುಕುಳಿಯುವ ಸಾಧ್ಯತೆ ಗಣನೀಯವಾಗಿ ಕಡಿಮೆಯಾಗಿದೆ.
ದುರದೃಷ್ಟವಶಾತ್, ಅನೇಕ ರೋಗಿಗಳು ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸೆಯ ಬಗ್ಗೆ ಇರುವ ಭಯ, ಸಾಮಾಜಿಕ ಕಳಂಕ, ಆರ್ಥಿಕ ಸಂಕಷ್ಟಗಳು, ಸಾಬೀತಾಗದ ಪರ್ಯಾಯ ಚಿಕಿತ್ಸೆಗಳ ಮೇಲಿನ ಕುರುಡು ನಂಬಿಕೆ ಯಂತಹ ಕಾರಣಗಳಿಂದಾಗಿ ಸರಿಯಾದ ಚಿಕಿತ್ಸೆಯನ್ನು ಪಡೆಯಲು ತಡ ಮಾಡುತ್ತಾರೆ. ಹೀಗಾಗಿ ಗುಣಪಡಿಸಬಹುದಾದ ಕ್ಯಾನ್ಸರ್ ಹಂತವು ಮುಂದುವರೆದ ಕ್ಯಾನ್ಸರ್ ಹಂತಕ್ಕೆ ತಲುಪಿ ಪ್ರಾಣಾಪಾಯದ ಸ್ಥಿತಿಗೆ ತಲುಪುತ್ತದೆ.
ಕ್ಯಾನ್ಸರ್ ಹರಡುವ ಕಾಯಿಲೆಯಲ್ಲ
ಕ್ಯಾನ್ಸರ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬ ಅಪಾಯಕಾರಿ ತಪ್ಪು ಕಲ್ಪನೆ ಇಂದಿಗೂ ಸಮಾಜದಲ್ಲಿದೆ. ಇದು ಸಂಪೂರ್ಣ ಸುಳ್ಳು. ಕ್ಯಾನ್ಸರ್ ಸ್ಪರ್ಶದಿಂದಾಗಲಿ, ಆಹಾರ ಹಂಚಿಕೊಳ್ಳುವುದರಿಂದಾಗಲಿ ಅಥವಾ ರೋಗಿಯ ಸಮೀಪ ಇರುವುದರಿಂದಾಗಲಿ ಹರಡುವುದಿಲ್ಲ. ಹೆಚ್ಪಿವಿ ಯಂತಹ ವೈರಸ್ಗಳು ಕೆಲವು ಕ್ಯಾನ್ಸರ್ಗಳ ಅಪಾಯವನ್ನು ಹೆಚ್ಚಿಸಬಹುದಾದರೂ, ಕ್ಯಾನ್ಸರ್ ಸ್ವತಃ ಒಂದು ಸಾಂಕ್ರಾಮಿಕ ರೋಗವಲ್ಲ. ಇಂತಹ ತಪ್ಪು ತಿಳುವಳಿಕೆಗಳು ರೋಗಿಗಳಲ್ಲಿ ಅನಗತ್ಯ ಭಯವನ್ನು ಹುಟ್ಟಿಸುತ್ತವೆ. ಈ ಭಯದಿಂದಲೇ ಕ್ಯಾನ್ಸರ್ ನಿಂದ ಬಳಲುವ ರೋಗಿಗಳನ್ನು ಸಮಾಜದಿಂದ ದೂರವಿಡುತ್ತಾರೆ.ಜಾಗೃತಿ ಮತ್ತು ಜವಾಬ್ದಾರಿಯ ಅಗತ್ಯತೆ
ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಅನ್ನು ಬಹುಮಟ್ಟಿಗೆ ತಡೆಗಟ್ಟಬಹುದು. ತಂಬಾಕು ಸೇವನೆ ತ್ಯಜಿಸುವುದು, ಮದ್ಯಪಾನವನ್ನು ಮಿತಿಗೊಳಿಸುವುದು, ಬಾಯಿಯ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಮತ್ತು ಆರಂಭಿಕ ಹಂತದಲ್ಲೇ ವೈದ್ಯಕೀಯ ಸಲಹೆ ಪಡೆಯುವುದರಿಂದ ಪ್ರತಿ ವರ್ಷ ಸಾವಿರಾರು ಜನರ ಪ್ರಾಣ ಉಳಿಸಬಹುದು. "ಕೂಲ್ ಹ್ಯಾಬಿಟ್ಸ್" ಎಂದು ಕರೆಯಲ್ಪಡುವ ಈ ಅಪಾಯಕಾರಿ ಹವ್ಯಾಸಗಳ ಹಿಂದಿರುವ ಅಸಲಿ ಸತ್ಯದ ಬಗ್ಗೆ ಪೋಷಕರು, ಶಿಕ್ಷಕರು ಮತ್ತು ಸಮುದಾಯದ ಮುಖಂಡರು ಯುವಜನತೆಗೆ ತಿಳಿಹೇಳಬೇಕಿದೆ.'ಕ್ಯಾನ್ಸರ್ ಗೆಲ್ಲೋಣ' ಕಾರ್ಯಕ್ರಮವು ವೀಕ್ಷಕರಿಗೆ ರೋಗದ ಲಕ್ಷಣಗಳು, ಚಿಕಿತ್ಸಾ ಆಯ್ಕೆಗಳು ಮತ್ತು ನೈಜ ಜೀವನದ ಅನುಭವಗಳ ಬಗ್ಗೆ ಸತತವಾಗಿ ಮಾಹಿತಿ ನೀಡುತ್ತಿದೆ. ಪ್ರತಿಯೊಬ್ಬರೂ ಜಾಗರೂಕರಾಗಿರಲು, ಪ್ರಶ್ನೆಗಳನ್ನು ಕೇಳಲು ಮತ್ತು ತಡ ಮಾಡದೆ ವೈದ್ಯರನ್ನು ಸಂಪರ್ಕಿಸಲು ಈ ಕಾರ್ಯಕ್ರಮವು ಉತ್ತೇಜನ ನೀಡುತ್ತದೆ.
ಪ್ರತಿಯೊಂದು ಕುಟುಂಬಕ್ಕೂ ಒಂದು ಸರಳ ಸಂದೇಶ
ನಿಮ್ಮಲ್ಲಿ ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ಗುಣವಾಗದ ಬಾಯಿ ಹುಣ್ಣು, ನಿರಂತರ ಗಂಟಲು ನೋವು ಅಥವಾ ಕುತ್ತಿಗೆಯಲ್ಲಿ ಗಡ್ಡೆ ಕಾಣಿಸಿಕೊಂಡರೆ, ದಯವಿಟ್ಟು ಅದನ್ನು ನಿರ್ಲಕ್ಷಿಸಬೇಡಿ. ಅಂತ್ಯವಿಲ್ಲದ ಮನೆಮದ್ದುಗಳನ್ನು ಮಾಡುತ್ತಾ ಕಾಲಹರಣ ಮಾಡಬೇಡಿ. ನೆನಪಿಡಿ, ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಎಂದರೆ ಸಾವು ಮತ್ತು ಬದುಕಿನ ನಡುವಿನ ಅಂತರವನ್ನು ನಿರ್ಧರಿಸಿದಂತೆ.ಕ್ಯಾನ್ಸರ್ ಎಂದಿಗೂ ಕೇಳಿ ಬರುವುದಿಲ್ಲ. ಕ್ಯಾನ್ಸರ್ ಬರುವ ಮುನ್ನ ನಿಮ್ಮ ದೇಹಕ್ಕೆ ಮುನ್ಸೂಚನೆಗಳನ್ನು ನೀಡುತ್ತದೆ. ನಿಮ್ಮ ದೇಹ ನೀಡುವ ಮುನ್ಸೂಚನೆಗಳನ್ನು ಸರಿಯಾಗಿ ಗುರುತಿಸಬೇಕಾಗಿದೆ. ಏಕೆಂದರೆ, ಇಂದು ನೀವು ತೆಗೆದುಕೊಳ್ಳುವ ಮುನ್ನೆಚ್ಚರಿಕೆಯು ನಾಳೆ ನಿಮ್ಮ ಜೀವವನ್ನು ಉಳಿಸಬಲ್ಲದು.