ಮಂಗಳೂರು, 29 (DaijiworldNews/TA): ಶರನ್ನವರಾತ್ರಿ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸೋ ಭವ್ಯ ದಿನಗಳಿವು. ನವರಾತ್ರಿಯ ಎಂಟನೇ ದಿನದಂದು ದುರ್ಗಾ ದೇವಿಯ ಮಹಾಗೌರಿ ರೂಪವನ್ನು ಆರಾಧಿಸಲಾಗುತ್ತೆ. ಪ್ರತಿರೂಪಕಗಳಿಗೂ ಒಂದೊಂದು ಕಥೆ ಹೆಣೆದುಕೊಂಡಿದೆ. ಮಹಾಗೌರಿ ದೇವಿಯ ಹೆಸರಿನ ಆಳದಲ್ಲೊಂದು ಅರ್ಥ ಅಡಗಿದೆ. ಹೆಸರಿನಂತೆ ಶೋಭಿಸೋ ಕಥೆಯೂ ಭಕ್ತಿಯ ಕಣ್ತುಂಬಿಕೊಳ್ಳುವಂತಿದೆ.
ಒಂದು ಹಸ್ತದಲ್ಲಿ ಢಮರುಗ, ಮ್ತತೊಂದರಲ್ಲಿ ತ್ರಿಶೂಲ, ಅಭಯ ಮುದ್ರೆ, ವರ ಮುದ್ರೆಯ ಮತ್ತೆರಡು ಕೈಗಳು, ಶ್ವೇತಕಾಂತಿಯ ಮೈಬಣ್ಣ, ಗೂಳಿಯೇ ವಾಹನ. ಶಾಂತ ಸ್ವರೂಪಿನಿಯಂತೆ ಶೋಭಿಸೋ ಆ ನಯನ. ಸೌಂದರ್ಯಲೋಕದ ಮಹಾಮಾತೆಯಂತೆ ವಿರಾಜಿಸೋ ದೇವಿಯೇ ಮಹಾಗೌರಿ ಸ್ವರೂಪ.ಮಹಾಗೌರಿ ದೇವಿಯನ್ನು ಎಂಟನೇ ದಿನದಂದು ಅಂದರೆ ಮಹಾ ಅಷ್ಟಮಿ ಅಥವಾ ದುರ್ಗಾಷ್ಟಮಿಯಂದು ಪೂಜಿಸಲಾಗುತ್ತದೆ. ಆಕೆಯ ಕಥೆಯೇ ಸೋಜಿಗ. ತಾಯಿ ದುರ್ಗೆಯು ಭೂಮಿಯ ಮೇಲೆ ಜನ್ಮವನ್ನು ಪಡೆದು, ಮರಳಿ ದೇವಲೋಕಕ್ಕೆ ಹೋಗಿ ಶಿವನನ್ನು ಮದುವೆಯಾಗಲು ಬಯಸುತ್ತಾಳೆ. ನಾರದರ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾಳೆ. ಆಕೆ ಸಂಪೂರ್ಣವಾಗಿ ತಪಸ್ಸಿನಲ್ಲಿ ಮಗ್ನವಾಗಿ ಆಹಾರ, ನೀರನ್ನು ತ್ಯಜಿಸಿರುವ ಸಮಯದಲ್ಲಿ ಆಕೆಯ ದೇಹದಲ್ಲಿ ಧೂಳು, ಕೊಳೆ ತುಂಬಿಕೊಳ್ಳುತ್ತದೆ. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುತ್ತದೆ. ಸಾವಿರಾರು ವರ್ಷಗಳ ತಪಸ್ಸಿನ ನಂತರ ಶಿವನು ಆಕೆಯಿಂದ ಪ್ರಭಾವಿತನಾಗಿ ಆಕೆಯ ದೇಹವನ್ನು ಹೊಳೆಯುವಂತೆ ಮಾಡಲು ಗಂಗೆಯನ್ನು ಹರಿಯಲು ಬಿಡುತ್ತಾನೆ ಎಂಬ ಪ್ರತೀತಿ ಇದೆ. ತಾಯಿಯ ಈ ರೂಪವು ಮಹಿಮೆಯಾಯಿತು. ಅದರ ನಂತರ ತಾಯಿ ಪಾರ್ವತಿಯ ಈ ರೂಪವನ್ನು ಮಹಾಗೌರಿ ಎಂದು ಕರೆಯಲಾಯಿತು ಎಂಬುವುದು ಉಲ್ಲೇಖ.
ಕಪ್ಪಾದ ದೇಹಕ್ಕೆ ಪ್ರಕಾಶ ನೀಡಿದ ಗಂಗೆ, ಕ್ರೋಧಕ್ಕೆ ತಂಪೆರೆದ ಮಾನಸ ಸರೋವರ. ಹೌದು ಮಾತೆಯ ಗಂಗಾಸ್ನಾನದ ಜೊತೆಗಿದೆ ಮಹಾಗೌರಿಯ ಮಾನಸ ಸರೋವರದ ಮಜ್ಜನದ ಕಥೆ. ಪಾರ್ವತಿ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವನ ದಂತಕಥೆ. ಈ ಬಗ್ಗೆ ಇನ್ನೊಂದು ದಂತ ಕಥೆಯಿದ್ದು ಕಾಳರಾತ್ರಿಯ ರೂಪದಲ್ಲಿ ಎಲ್ಲಾ ರಾಕ್ಷಸರನ್ನು ಕೊಂದ ನಂತರ ದೇವಿಯು, ಕಠಿಣ ತಪಸ್ಸು ಮಾಡಿ ಬ್ರಹ್ಮನಿಗೆ ಅರ್ಘ್ಯವನ್ನು ಅರ್ಪಿಸ್ತಾಳೆ. ಬಳಿಕ ಅವಳ ತಪಸ್ಸಿಗೆ ಮೆಚ್ಚಿದ ಬ್ರಹ್ಮ ದೇವ, ಪಾರ್ವತಿಗೆ ಒಂದು ಸಲಹೆ ನೀಡುತ್ತಾನೆ. ಬಳಿಕ ಅವನ ಅಣತಿಯಂತೆ ಮಾತೆಯು, ಮಾನಸ ಸರೋವರದಲ್ಲಿ ಸ್ನಾನ ಮಾಡ್ತಾಳೆ. ಈ ನದಿಯಲ್ಲಿ ಸ್ನಾನ ಮಾಡಿದ ನಂತರ ತಾಯಿಯ ರೂಪವು ಪ್ರಕಾಶಮಾನವಾಗುತ್ತೆ. ಅದಕ್ಕಾಗಿಯೇ ಈ ತಾಯಿಯ ರೂಪವನ್ನು ಮಹಾಗೌರಿ ಎಂದು ಕರೆಯಲಾಯಿತು ಎಂಬುವುದೂ ಪ್ರತೀತಿ.
ಭಕ್ತರ ಬದುಕಿನಲ್ಲಿ ಇರುವ ಸಂಕಷ್ಟಗಳನ್ನು ತಾಯಿ ಗೌರಿ ಪರಿಹರಿಸಿ ತನ್ನ ಆಶೀರ್ವಾದದಿಂದ ದುಃಖಗಳನ್ನು ದೂರ ಮಾಡುತ್ತಾಳೆ. ನಮ್ಮ ಗುರಿ ಮುಟ್ಟಲು ನೆರವಾಗುತ್ತಾಳೆ ಎಂಬುವುದು ನಂಬಿಕೆ. ಪುರಾಣದಲ್ಲೊಂದು ಕಥೆ ಆಯಾಯ ಊರಿಗೆ ಅನುಸಾರವಾಗಿ ಅನೇಕ ಕಥೆಗಳು. ಇದು ಇತಿಹಾಸದ, ಪುರಾಣದ ಸೌಂದರ್ಯದ ಮೆಲುಕು.
ಯಾ ದೇವಿ ಸರ್ವಭೂತೇಷು ಮಾ ಮಹಾಗೌರಿ ಸಂಸ್ಥಿತಾ| ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||