ಮಂಗಳೂರು, ಸೆ. 27 (DaijiworldNews/TA): ನವದೇವಿ ರೂಪಕಗಳ ಪವಿತ್ರ ಪೂಜೆಯ ಮಹತ್ತರ ಆಚರಣೆಯೇ ನವರಾತ್ರಿ. ಒಂಭತ್ತು ದಿನ ನವದೇವಿಯರನ್ನು ಆರಾಧಿಸಲಾಗುತ್ತೆ. ನವರಾತ್ರಿಯ ಆರನೇ ದಿನ ಕಾತ್ಯಾಯಿಣಿ ರೂಪದಲ್ಲಿ ದೇವಿಯನ್ನು ಆರಾಧನೆ ಮಾಡಲಾಗುತ್ತೆ. ಈ ಆರಾಧನೆಯ ಹಿಂದೊಂದು ತೇಜಶ್ಶಕ್ತಿಯ ಕಥೆ ಇದೆ.
ಚಂದ್ರ ಹಾಸೋಜ್ಜ್ವಲಕರಾ ಶಾರ್ದೂಲ ವರವಾಹನಾ | ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ ||
ಒಂದು ಕೈಯಲ್ಲಿ ಕಮಲ, ಮತ್ತೊಂದರಲ್ಲಿ ಖಡ್ಗ , ಭಕ್ತರಿಗೆ ಆಶೀರ್ವಾದ ನೀಡುವ ಮತ್ತೆರಡು ಕೈಗಳು. ಸಿಂಹವೇ ವಾಹನ, ಚಿನ್ನದ ಮೈಬಣ್ಣ. ಹೀಗೆ ಪ್ರಕಾಶಮಾನವಾಗಿ ಕಂಗೊಳಿಸೋ ದೈವಿಕ ಕಾತ್ಯಾಯಿನಿ ದೇವಿ. ದೇವತೆಯ ಹೆಸರಿಗೂ ಕತ ಎಂಬ ಋಷಿಯ ಗೋತ್ರದ ನಂಟಿದೆ. ಆದ್ದರಿಂದ ಈ ದೇವಿಯನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತೆ. ತಾಯಿಗೆ ಹಳದಿ ಬಣ್ಣ ಎಂದರೆ ತುಂಬಾ ಇಷ್ಟ ಎಂಬುವುದು ಉಲ್ಲೇಖ.
ಆ ಜಗಜ್ಜನನಿಗೆ ಕಾತ್ಯಾಯಿನಿ ಹೆಸರಿನ ಹಿಂದೊಂದು ಋಷಿ ಹಿನ್ನೆಲೆ ಇದೆ ತಪಸ್ಸಿನ ಫಲದ ಕಥೆ ಇದೆ. ಹೌದು ಕತ ಎಂಬ ಋಷಿ ಇದ್ದರು. ಅವರ ಮಗನ ಹೆಸರು ಕಾತ್ಯ. ಇದೇ ಕಾತ್ಯ ಋಷಿಯ ಗೋತ್ರದಲ್ಲಿ ಜನಿಸಿದವರು ಕಾತ್ಯಾಯನ. ಆ ಭಗವತಿಯು ತಮ್ಮ ಮನೆಯಲ್ಲಿ ಮಗಳಾಗಿ ಹುಟ್ಟಬೇಕು ಎಂಬ ಅಭೀಷ್ಟದಿಂದ ಕಾತ್ಯಾಯನ ಕಠಿಣವಾದ ತಪಸ್ಸು ಮಾಡಿದರು. ಪ್ರಾರ್ಥನೆಯನ್ನು ಆ ದೇವಿ ನಡೆಸಿಕೊಟ್ಟಳು ಎಂದು ಹೇಳಲಾಗುತ್ತೆ. ಋಷಿವರ್ಯರಿಗೆ ಕೆಲ ಸಮಯದ ನಂತರ ರಾಕ್ಷಸನಾದ ಮಹಿಷಾಸುರನ ಉಪಟಳವು ವಿಪರೀತ ಹೆಚ್ಚಾಯಿತು. ಆಗ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಹಾಗೂ ಎಲ್ಲ ದೇವತೆಗಳು ಸೇರಿ, ತಂತಮ್ಮ ತೇಜಶ್ಶಕ್ತಿಯ ಅಂಶವನ್ನು ನೀಡಿ, ಒಬ್ಬ ದೇವಿಯನ್ನು ಸೃಷ್ಟಿ ಮಾಡಿದರು. ಆಕೆಯು ಮಹಿಷಾಸುರನ ಸಂಹಾರಕ್ಕಾಗಿಯೇ ಸೃಷ್ಟಿಯಾದವಳು ಎಂದೂ ಉಲ್ಲೇಖವಿದೆ.
ಋಷಿಗಳಾದ ಕಾತ್ಯಾಯನರು ಈ ದೇವಿಯ ಪೂಜೆಯನ್ನು ಮೊದಲಿಗೆ ಮಾಡಿದರು. ಆ ಕಾರಣದಿಂದ ಆಕೆಗೆ ಕಾತ್ಯಾಯಿನಿ ಎಂಬ ಹೆಸರು ಬಂತು ಎಂದು ಹೇಳಲಾಗುತ್ತೆ. ಜತೆಗೆ ಕಾತ್ಯಾಯನರಿಗೆ ಈಕೆ ಮಗಳಾಗಿ ಹುಟ್ಟಿದಳು ಎಂಬ ಉಲ್ಲೇಖ ಸಹ ಇದೆ. ತಾಯಿ ಕಾತ್ಯಾಯನಿ ದೇವಿಯ ಅವತಾರದ ಉದ್ದೇಶವು ಮಹಿಷಾಸುರನನ್ನು ಸಂಹಾರ ಮಾಡುವುದಾಗಿತ್ತು. ಋಷಿಮುನಿಗಳು ಪೂಜಿಸಿದ ನಂತರ ಅವತಾರ ಎತ್ತಿದ ತಾಯಿ ಕಾತ್ಯಾಯನಿಯು ಅಶ್ವಿನಿ ಮಾಸದ ಶುಕ್ಲ ನವಮಿ ತಿಥಿಯಲ್ಲಿ ಮಹಿಷನೊಂದಿಗೆ ಯುದ್ಧ ಮಾಡಿ ಸಂಹಾರ ಮಾಡಿದಳು. ದಶಮಿ ದಿನದಂಧು ದೇವಿಯು ಜೇನುತುಪ್ಪ ತುಂಬಿದ ವೀಳ್ಯದ ಎಲೆಯನ್ನು ಸೇವಿಸಿ ನಂತರ ಮಹಿಷನನ್ನು ಕೊಂದಳು ಎಂದು ಪುರಾಣದ ಕಥೆಗಳು ಹೇಳುತ್ತವೆ. ಇದಾದ ನಂತರ ತಾಯಿಯನ್ನು ಮಹಿಷಾಸುರ ಮರ್ದಿನಿ ಎನ್ನುವ ಹೆಸರಿನಿಂದ ಕರೆಯಲಾಯಿತು. ಮಹಿಷನ ಸಂಹಾರಕ್ಕಾಗಿ ಜನ್ಮತಾಳಿದಾಕೆ ಕತ್ಯಾಯಿನಿ. ಮಹಾಶಕ್ತಿಗೆ ದೇವಾನುದೇವತೆಗಳ ಅಸ್ತ್ರವೇ ದುಪ್ಪಟ್ಟು ಶಕ್ತಿಯಾಗಿತ್ತು. ಅಂತಹ ಶಕ್ತಿ ದೇವಿಗೂ ಗೋಪಿಕೆಯರಿಗೂ ಇದೆ ಒಂದು ನಂಟಿನ ಕಥೆ. ಶ್ರೀ ರಾಮ ಮತ್ತು ಶ್ರೀ ಕೃಷ್ಣನ ಆರಾಧನಾ ದೇವಿಯ ಅಸ್ತ್ರದ ಕಥೆ ಇದು.
ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧವನ್ನು ‘ಕೆಟ್ಟದರ ಮೇಲೆ ಒಳ್ಳೆಯದರ ವಿಜಯ’ ಎಂದು ಗುರುತಿಸಲಾಗಿದೆ. ಶಿವನು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ಭಗವಾನ್ ವಿಷ್ಣುವು ಸುದರ್ಶನ ಚಕ್ರವನ್ನು, ಅಗ್ನಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಒಂದು ಗುಡುಗು, ಬ್ರಹ್ಮದೇವನು ನೀರಿನ ಕಲಶದೊಂದಿಗೆ ರುದ್ರಾಕ್ಷಿಯನ್ನು ನೀಡಿದರು. ಈ ಆಯುಧಗಳ ಸಹಾಯದಿಂದ ದೇವಿ ಕಾತ್ಯಾಯಿನಿ ಮಹಿಷಾಸುರನ ವಧೆ ಮಾಡಿದಳು ಎಂದು ಪುರಾಣ ಕಥೆಗಳು ಹೇಳುತ್ತವೆ. ಮತ್ತೊಂದೆಡೆ, ಕಾತ್ಯಾಯಿನಿ ದೇವಿಯ ಕಥೆ ಭಾಗವತ, ಮಾರ್ಕಂಡೇಯ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇಲ್ಲಿ ದೇವಿಯ ಆರನೇ ರೂಪವಾದ ತಾಯಿ ಕಾತ್ಯಾಯಿನಿಯನ್ನು ಶ್ರೀ ರಾಮ ಮತ್ತು ಶ್ರೀ ಕೃಷ್ಣ ಇಬ್ಬರೂ ಪೂಜಿಸುತ್ತಿದ್ದರು ಎನ್ನಲಾಗಿದೆ. ಇನ್ನು ಕೃಷ್ಣನನ್ನು ಪತಿಯಾಗಿ ಪಡೆಯುವ ಬಯಕೆಯಿಂದ ಗೋಪಿಕೆಯರು ಕಾಳಿಂದಿ- ಯಮುನಾ ನದಿಯ ದಡದಲ್ಲಿ ಕಾತ್ಯಾಯನಿಯ ಪೂಜೆ ಮಾಡಿದ್ದರು ಎಂಬ ಕಥೆಯೂ ಐತಿಹ್ಯದಲ್ಲಿ ಅಡಗಿದೆ.
ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಜನ್ಮಜನ್ಮಾಂತರದ ಪಾಪಗಳು ನಾಶ ಆಗುತ್ತವೆ. ಇಹ ಲೋಕದಲ್ಲಿ ದೇವಿಯ ಆರಾಧಕರು ಅಲೌಕಿಕವಾದ ತೇಜಸ್ಸು, ಕಾಂತಿ, ಸಮಾಧಾನ- ಸಂತೃಪ್ತಿಯನ್ನು ಕಾಣಬಹುದು ಎಂಬುವುದು ನಂಬಿಕೆ. ಪುರಾಣದಲ್ಲೊಂದು ಕಥೆ ಆಯಾಯ ಊರಿಗೆ ಅನುಸಾರವಾಗಿ ಅನೇಕ ಕಥೆಗಳು. ಇದು ಇತಿಹಾಸದ ಸೌಂದರ್ಯದ ಮೆಲುಕು.