ಮಂಗಳೂರು, ಸೆ. 27 (DaijiworldNews/TA): ನವದೇವಿ ರೂಪಕಗಳ ಪವಿತ್ರ ಪೂಜೆಯ ಮಹತ್ತರ ಆಚರಣೆಯೇ ನವರಾತ್ರಿ. ಒಂಭತ್ತು ದಿನ ನವದೇವಿಯರನ್ನು ಆರಾಧಿಸಲಾಗುತ್ತೆ. ನವರಾತ್ರಿಯ ಐದನೇ ದಿನ ಸ್ಕಂದಮಾತಾ ರೂಪದಲ್ಲಿ ದೇವಿಯನ್ನು ಆರಾಧನೆ ಮಾಡಲಾಗುತ್ತೆ. ಈ ಆರಾಧನೆಯ ಹಿಂದೊಂದು ತಾಯಿಯ ವಿಜಯದ ಕಥೆ ಇದೆ.
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||
ಒಂದು ಕೈಯಲ್ಲಿ ಸ್ಕಂದ, ಮತ್ತೊಂದು ಹಸ್ತದಲ್ಲಿ ಭಕ್ತರಿಗೆ ಆಶೀರ್ವಾದ , ಪದ್ಮವೇ ಆಸನ, ಸಿಂಹವೇ ವಾಹನ. ಮ್ತತೆರಡೂ ಕೈಯಲ್ಲಿ ಕಮಲ ಹಿಡಿದು ನಾಲ್ಕು ಭುಜಗಳಿಂದ ಶೋಭಿಸೋ ಮಹಾಮಾತೆಯೇ ಸ್ಕಂದಮಾತೆ. ಸ್ಕಂದ ಅಂದ್ರೆ ಷನ್ಮುಖ ಸುಬ್ರಹ್ಮಣ್ಯ ಎಂದು ತಿಳಿದಿರೋ ವಿಚಾರ ಮಾತೆ ಅಂದ್ರೆ ತಾಯಿ, ಒಟ್ಟಾರೆ ಈ ಪದದ ಅರ್ಥ ಸ್ಕಂದನಿಗೆ ತಾಯಿಯಾದ ಸಮಯ ಎಂದು ಹೇಳಲಾಗುತ್ತೆ. ಕೆಂಪು ಬಣ್ಣದ ಹೂವು ವಿಶೇಷವಾಗಿ ಗುಲಾಬಿ ಹೂವಿನ ಪ್ರಿಯೆ ಈ ಮಾತೆ. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಸ್ಕಂದಮಾತೆ ಅವತಾರಕ್ಕೆ ಆರಾಧನೆ ಮಾಡಲಾಗುತ್ತೆ ಎಂಬುವುದು ಉಲ್ಲೇಖ.
ತಾರಕಾಸುರ ಎನ್ನುವ ರಾಕ್ಷಸನನ್ನು ಸಂಹಾರ ಮಾಡುವುದಕ್ಕೆ ದೇವಿ ಸ್ಕಂದನ ಜನನವಾಗುತ್ತೆ. ಅದಕ್ಕಾಗಿಯೇ ಈಕೆಯನ್ನು ಸ್ಕಂದಮಾತಾ ಎಂದು ಕರೆಯಲಾಗುತ್ತದೆ. ಇನ್ನು ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಣ ಮಾಡುವ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದ ಮಾತೆ ಎನ್ನುತ್ತಾರೆ. ನವರಾತ್ರಿಯ ಪೂಜೆಯಲ್ಲಿ 5ನೇ ದಿನದ ಮಹತ್ವದ ಕುರಿತು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.
ತಾರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡುವ ಸಲುವಾಗಿ ಮಾತೆ ಸ್ಕಂದನಿಗೆ ಜನ್ಮ ಕೊಡುತ್ತಾಳೆ ಎಂಬ ವಿಚಾರ ಅರಿತಾಯ್ತು ಹಾಗಿದ್ರೆ ಈ ತಾರಕಾಸುರ ಯಾರು ಆತನಿಗೋಸ್ಕರ ಸ್ಕಂದ ಜನ್ಮ ಯಾಕೆ. ಅದರ ಹಿಂದೊಂದು ಮಹತ್ತರವಾದ ಕಥೆ ಇದೆ. ಪುರಾಣಲೋಕದಲ್ಲಿ ತಾರಕಾಸುರ ಎಂಬ ರಾಕ್ಷಸನಿದ್ದ ಆತ ಬ್ರಹ್ಮನನ್ನು ಕುರಿತು ತಪಸ್ಸು ಮಾಡ್ತಾ ಇರ್ತಾನೆ. ಅನೇಕ ವರ್ಷಗಳ ತಪಸ್ಸಿನ ಬಳಿಕ ಆ ತಾರಕಾಸುರನಿಗೆ ಬ್ರಹ್ಮ ಒಲಿಯುತ್ತಾನೆ. ಬ್ರಹ್ಮ ತಾರಕಾಸುರನಿಗೆ ವರ ನೀಡುತ್ತಾನೆ. ಆತ ಸಾವೇ ಇಲ್ಲದಂತೆ ಅಮರತ್ವವನ್ನು ಕರುಣಿಸು ಎಂದು ವರ ಕೇಳುತ್ತಾನೆ. ಆದ್ರೆ ಅಮರತ್ವದ ವರ ಕೇಳುವಂತಿಲ್ಲ ಎಂದಾಗ ಇನ್ನೇನಾದರೂ ಕೇಳು ಎಂದಾಗ ತಾರಕ ಯೋಚಿಸಿ ಶಿವ ಪಾರ್ವತಿಗೆ ಹುಟ್ಟಬಹುದಾದ ಮಗನಿಂದ ನನಗೆ ಸಾವು ಬರಲಿ ಎಂದು ಕೇಳುತ್ತಾನೆ. ಆತ ಯಾಕೆ ಈ ವರ ಕೇಳಿದ ಅಂದ್ರೆ ತಾರಕನಿಗೆ ಸತಿ ಯಜ್ಞದಲ್ಲಿ ಆತ್ಮಾಹುತಿ ಮಾಡಿದ ವಿಚಾರ ತಿಳಿದಿರುತ್ತೆ. ಆದ್ರೆ ತಾರಕಾಸುರನಿಗೆ ಗೊತ್ತಿಲ್ಲದ ವಿಚಾರ ಏನಂದ್ರೆ ಅದೇ ಸತಿ ಅಂದ್ರೆ ದಾಕ್ಷಾಯಿಣಿ ಮುಂದಿನ ಜನ್ಮದಲ್ಲಿ ಹಿಮವಂತನ ಮಗಳಾಗಿ ಹುಟ್ಟಿ ಪಾರ್ವತಿಯಾಗಿ ಶಿವನಿಗಾಗಿ ತಪಸ್ಸು ಮಾಡುತ್ತಿರುತ್ತಾಳೆ.
ಇದು ತಿಳಿದ ಬ್ರಹ್ಮದೇವ ಅವನಿಗೆ ವರ ಕೊಡ್ತಾನೆ. ಪಾರ್ವತಿ ತಪಸ್ಸಿಗೆ ಒಲಿದು ಶಿವ ಪಾರ್ವತಿ ವಿವಾಹವೂ ನಡೆಯುತ್ತೆ. ಆದ್ರೆ ಶಿವನ ಕ್ರೋಧದಿಂದ ಜಗತ್ತಲ್ಲಿ ಅಗ್ನಿ ಜ್ವಾಲೆ ಸುರಿಯಲಾರಂಭಿಸುತ್ತೆ. ಇದನ್ನು ಪಾರ್ವತಿ ತನ್ನ ಪ್ರೀತಿ ಶ್ರದ್ಧೆ ಭಕ್ತಿಯಂದ ಆ ಜ್ವಾಲೆಯ ಉಷ್ಣತೆ ಕಡಿಮೆ ಮಾಡಲು ಪ್ರಯತ್ನಿಸುತ್ತಾಳೆ. ಆದ್ರೆ ಜ್ವಾಲೆಯ ತೀವ್ರತೆ ಕಡಿಮೆ ಆಗೋದಿಲ್ಲ ಬದಲಾಗಿ ಅಲ್ಲಿ ಸ್ಕಂದ ಎಂಬ ಮಗ ಹುಟ್ಟುತ್ತಾನೆ. ಆತನೆ ಷನ್ಮುಖ ಸುಬ್ರಹ್ಮಣ್ಯ. ಅನೇಕ ದಿನಗಳ ನಂತರ ಸ್ಕಂದನ ಸಹಾಯದಿಂದ ಜಗನ್ಮಾತೆ ತಾರಕಾಸುರನ ವಧೆ ಮಾಡುತ್ತಾಳೆ ಇದು ಪುರಾಣದಲ್ಲಿನ ಉಲ್ಲೇಖ. ಶುದ್ಧ ಮನಸ್ಸು, ಭಕ್ತಿಯಿಂದ ಯಾರು ದೇವಿಯ ಆರಾಧನೆ ಮಾಡುತ್ತಾರೋ ಅವರಿಗೆ ಸಂಪತ್ತು ಹಾಗೂ ಸಮೃದ್ಧಿ ಪ್ರಾಪ್ತವಾಗುತ್ತದೆ. ಪುರಾಣದಲ್ಲೊಂದು ಕಥೆ ಆಯಾಯ ಊರಿಗೆ ಅನುಸಾರವಾಗಿ ಅನೇಕ ಕಥೆಗಳು. ಇದು ಇತಿಹಾಸದ ಸೌಂದರ್ಯದ ಮೆಲುಕು.