ಮಂಗಳೂರು, ಸೆ. 26(DaijiworldNews/TA): ನವರಾತ್ರಿಯಲ್ಲಿ ಆದಿಶಕ್ತಿಯ ಆರಾಧನೆ ಎಲ್ಲೆಡೆ ನಡೆಯುತ್ತದೆ. ಪ್ರತಿದಿನವೂ ಒಂದೊಂದು ಶಕ್ತಿ ದೇವತೆಯನ್ನು ಪೂಜಿಸಿ ಆಶೀರ್ವಾದ ಪಡೆಯಲಾಗುತ್ತದೆ. ನವರಾತ್ರಿಯ ಮೂರನೇ ದಿನ ನವದುರ್ಗೆಯರಲ್ಲಿ ಮೂರನೇ ಶಕ್ತಿಯಾದ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಪಾರ್ವತಿ ಪ್ರತಿರೂಪದ ಮತ್ತೊಂದು ಅವತಾರಕ್ಕೂ ಒಂದು ಕಥೆ ಬೆಸೆದುಕೊಂಡಿದೆ. ಹೆಸಸರಲ್ಲೇ ವಿಶೇಷವಾಗಿರೋ ದೇವಿ ಅವತಾರವೂ ವಿಭಿನ್ನವಾಗಿ ಗೋಚರವಾಗುತ್ತೆ.
ಮಸ್ತಕದಲ್ಲಿ ಚಂದಿರ, ಒಂಬತ್ತು ಕೈಗಳಲ್ಲಿ ಶಸ್ತ್ರಾಸ್ತ್ರ, ಶೌರ್ಯಪ್ರದರ್ಶನದಲ್ಲೂ ಆಶೀರ್ವಾದದ ಭಂಗಿ. ಸಿಂಹವೇ ವಾಹನ, ಮೂರನೇ ಕಣ್ಣಲ್ಲೇ ರಕ್ಕಸರ ಶಮನ. ಹೌದು, ಚಂದ್ರಘಂಟಾ ದೇವಿಯ ಭವ್ಯ ರೂಪದ ಚಿತ್ರಣ ಇದು. ಹೆಸರೇ ಸೂಚಿಸುವಂತೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಎಂಬ ಅರ್ಥವನ್ನು ಸೂಚಿಸೋ ನಾಮ ಒಂದು ವಿಶೇಷವಾದ್ರೆ. ದೇವಿಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಿರುವುದು ಮತ್ತೊಂದು ವಿಶೇಷ. ಸೌಂದರ್ಯವಂತೆ ಚಂದ್ರಘಂಟೆಯನ್ನು ಚಂದ್ರಿಕಾ, ಚಂಡಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಒಂಬತ್ತು ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡಿದ್ದು ಇನ್ನೊಂದು ಕೈ ಆಶೀರ್ವಾದ ಮಾಡುವ ಭಂಗಿಯಲ್ಲಿದ್ದು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ. ಇದು ಶೌರ್ಯ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತದೆ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಕೂಡ ಪಡೆಯಬಹುದು ಎಂಬುವುದೂ ನಂಬಿಕೆ.
ಮೊದಲೇ ಹೇಳಿದಂತೆ ದುರ್ಗಾ ದೇವಿಯ ಒಂಭತ್ತು ಅವತಾರಗಳ ಆರಾಧನೆಯೇ ಈ ನವರಾತ್ರಿ ಉತ್ಸವ. ನವ ಅವತಾರದ ಹಿಂದೆಯೂ ಒಂಭತ್ತು ಕಥೆಗಳಿವೆ. ಪ್ರತಿಯೊಂದು ಕಥೆಯು ಒಂದಕ್ಕೊಂದು ಕೊಂಡಿಯಂತಿದೆ. ಶೈಲಪುತ್ರಿ, ಬ್ರಹ್ಮಚಾರಿಣಿ ಕಥಾನಕದ ಮುಂದುವರಿದ ಭಾಗದಂತೆ ಬ್ರಹ್ಮಚಾರಿಣಿ ತಪಸ್ಸಿಗೆ ಮನಸೋತ ಶಿವ ಪಾರ್ವತಿ ವಿವಾಹವೂ ನಿಶ್ಚಯವಾಗುತ್ತೆ. ಹೌದು ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಪಾರ್ವತಿಯ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯೊಂದಿಗೆ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ ಎಂಬುದು ಪುರಾಣದ ಉಲ್ಲೇಖ.
ಒಂದೆಡೆ ವಿವಾಹ ಸಂಭ್ರಮದಲ್ಲಿನ ಶಿವಭಯಂಕರನಿಗಾಗಿ ಪಾರ್ವತಿ ಚಂದ್ರಘಂಟಾ ರೂಪ ತಾಳಿದಳೆಂದು ಉಲ್ಲೇಖವಾಗಿದ್ರೆ ಮತ್ತೊಂದು ಕಥೆಯ ಪ್ರಕಾರವಾಗಿ ಘಂಟಾರೂಪದಿಂದ ರಕ್ಕಸರ ಶಮನವಾಯಿತೆಂದು ಹೇಳಲಾಗುತ್ತೆ . ಆ ಕೌತುಕದ ಕಥೆಯೂ ಸೊಗಸಾಗಿದೆ. ಹೌದು ಶಿವ ಪಾರ್ವತಿ ವಿವಾಹ ವಿಚಾರವಾಗಿ ಅನೇಕ ಕಥೆಗಳು ಹೆಣೆಯಲ್ಪಟ್ಟಿದೆ. ಮತ್ತೊಂದೆಡೆ ಅಸುರರು ಮತ್ತು ಚಂದ್ರಘಂಟಾ ಯುದ್ಧದ ಉಲ್ಲೇಕವೂ ಪ್ರಮುಖವಾಗಿದೆ. ಮಹಿಷಾಸುರನೆಂಬ ರಾಕ್ಷಸನು ಇಂದ್ರ ದೇವನ ಸಿಂಹಾಸನವನ್ನು ಪಡೆಯಲು ಬಯಸಿದಾಗ ದೇವತೆಗಳಿಗೆ ಕೋಪಬರುತ್ತದೆ. ಕೋಪದ ಕಾರಣ ಮೂವರ ಬಾಯಿಂದ ಹೊರಹೊಮ್ಮಿದ ಶಕ್ತಿಯು ಚಂದ್ರಾಘಂಟಾ ದೇವಿ ಎಂದು ಹೇಳಲಾಗುತ್ತೆ. ಚಂದ್ರಘಂಟಾ ರೂಪವು ಈ ವೇಳೆ ದೇವಿಯು ಹತ್ತು ಕೈಗಳಿದ್ದು, ಒಂಬತ್ತು ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡಿದ್ದು ಇನ್ನೊಂದು ಕೈ ಆಶೀರ್ವಾದ ಮಾಡುವ ಭಂಗಿಯಲ್ಲಿದ್ದು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ. ಇದು ಶೌರ್ಯ ಮತ್ತು ಧೈರ್ಯವನ್ನು ಪ್ರತಿನಿಧಿಸುವ ಒಂದು ಅವತಾರವಾಗಿರುತ್ತದೆ ಎಂದು ಹೇಳಲಾಗಿದೆ.
ದೇವಿಯ ಮಸ್ತಕದಲ್ಲಿರುವ ಚಂದ್ರಘಂಟಾ ನಾದವು ಋಣಾತ್ಮಕ ಶಕ್ತಿಯನ್ನು ಹೊಂದಿದ್ದು, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು. ಹಾಗಾಗಿ ಚಂದ್ರಘಂಟಾ ದೇವಿಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆಶುದ್ಧಿಯಾಗುವುದು. ಪುರಾಣದಲ್ಲೊಂದು ಕಥೆ ಆಯಾಯ ಊರಿಗೆ ಅನುಸಾರವಾಗಿ ಅನೇಕ ಕಥೆಗಳು. ಇದು ಇತಿಹಾಸದ ಸೌಂದರ್ಯದ ಮೆಲುಕು.
ಯಾ ದೇವಿ ಸರ್ವಭೂತೇಷು ಮಾ ಚಂದ್ರಘಂಟಾ ರೂಪೇಣ ಸಂಸ್ಥಿತಾ| ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ