ಮಂಗಳೂರು, ಸೆ. 23 (DaijiworldNews/AA): ಈಗಾಗಲೇ ಶಾರದೀಯ ನವರಾತ್ರಿ ಪ್ರಾರಂಭವಾಗಿದೆ. ಈ ಅವಧಿಯಲ್ಲಿ ಪ್ರತಿಯೊಂದು ದಿನವೂ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇ ದಿನದಂದು ದುರ್ಗಾ ದೇವಿಯ ಬ್ರಹ್ಮಚಾರಿಣಿ ರೂಪವನ್ನು ಆರಾಧಿಸಲಾಗುತ್ತೆ. ಪ್ರತಿರೂಪಕಗಳಿಗೂ ಒಂದೊಂದು ಕಥೆ ಹೆಣೆದುಕೊಂಡಿದೆ. ಬ್ರಹ್ಮಚಾರಿಣಿ ದೇವಿಯ ಹೆಸರಿನ ಆಳದಲ್ಲೊಂದು ಅರ್ಥ ಅಡಗಿದೆ. ಜೊತೆಗೆ ಪಾರ್ವತಿ ಪ್ರತಿರೂಪದ ಮತ್ತೊಂದು ಪುರಾಣದ ಉಲ್ಲೇಖವೂ ಇದೆ.
ಕೈಯಲ್ಲೊಂದು ಕಮಂಡಲ, ಬಿಳಿ ಬಣ್ಣದ ಮಾಲೆಗಳ ಅಲಂಕಾರ, ಯಜ್ಞಕ್ಕೆ ಸೃಕ್ ಹಾಗೂ ಸೃವ, ಆ ಶಿವನಿಗಾಗಿ ನಿರಂತರ ಜಪ. ಈ ಚಿತ್ರಣದಲ್ಲೇ ಅಡಗಿದೆ ಅಚ್ಚಳಿಯದ ಕಥನ. ಹೌದು ಪಾರ್ವತಿ ಅವತರಿತೆ ಬ್ರಹ್ಮಚಾರಿಣಿ ಸನ್ಯಾಸತ್ವದ ಸಂಕೇತವಲ್ಲ ಬದಲಾಗಿ ಬ್ರಹ್ಮ ಅಂದ್ರೆ ತಪಸ್ಸು ಮಾಡುವವಳು ಚಾರಿಣಿ ಎಂದರೆ ನಡವಳಿಕೆ ಅನುಸರಿಸುವುದು ಸ್ತ್ರೀ ರೂಪಕ ಎಂದೂ ನಾನಾ ಅರ್ಥಗಳಿವೆ. ಆದ್ದರಿಂದ ತಪಸ್ಸು ಅಥವಾ ಕಠಿಣ ದೈವಿ ಜ್ಞಾನವನ್ನು ಆಚರಿಸುವ ಸ್ತ್ರೀ ಎಂಬುವುದಾಗಿ ಸಂಪೂರ್ಣ ಅರ್ಥವನ್ನೂ ಕಲ್ಪಿಸುತ್ತದೆ.
ದುರ್ಗಾ ದೇವಿಯ ಒಂಭತ್ತು ಅವತಾರಗಳ ಆರಾಧನೆಯೇ ಈ ನವರಾತ್ರಿ ಉತ್ಸವ. ನವ ಅವತಾರದ ಹಿಂದೆಯೂ ಒಂಭತ್ತು ಕಥೆಗಳಿವೆ. ಪ್ರತಿಯೊಂದು ಕಥೆಯು ಒಂದಕ್ಕೊಂದು ಕೊಂಡಿಯಂತಿದೆ. ಶೈಲಪುತ್ರಿ ಕಥೆಯಲ್ಲಿ ತಿಳಿಸಿದಂತೆ ಸತಿದೇವಿಯ ಕಥಾನಕ ಉಲ್ಲೇಖವಾಗುತ್ತೆ. ಇಲ್ಲೂ ಅದರ ಮುಂದುವರಿದ ಭಾಗದಂತೆ ಸತಿ ದೇವಿಯು ತನ್ನ ತಂದೆ ದಕ್ಷನ ಯಜ್ಞದ ಅಗ್ನಿಗೆ ಹಾರಿ ಪ್ರಾಣ ತ್ಯಾಗ ಮಾಡಿದಾಗ, ಆಕೆ ತನ್ನ ಮುಂದಿನ ಜನ್ಮದಲ್ಲಿ ಪರ್ವತಗಳ ರಾಜ ಹಿಮಾಲಯನ ಮಗಳಾಗಿ ಜನಿಸುತ್ತಾಳೆ. ಈ ಜನ್ಮದಲ್ಲಿ ಅವಳ ಹೆಸರು ಪಾರ್ವತಿ. ಈ ಜನ್ಮದಲ್ಲಿಯೂ ಶಿವನನ್ನು ಪತಿಯಾಗಿ ಪಡೆಯಬೇಕೆಂದು ಬಯಸಿದ್ದಳು. ಇದಕ್ಕಾಗಿ ಆಕೆ ಕಠಿಣ ತಪಸ್ಸನ್ನು ಮಾಡ್ತಾಳೆ. ಆಕೆಯ ತಪಸ್ಸಿನಿಂದಲೇ ಆಕೆಗೆ ಬ್ರಹ್ಮಚಾರಿಣಿ ಎಂಬ ಹೆಸರು ಬಂದಿತು ಎಂಬುದು ಪುರಾಣ. ಈ ಕಾರಣದಿಂದಲೇ ಬ್ರಹ್ಮಚಾರಿಣಿ ದೇವಿಯನ್ನು ತಪಸ್ಸಿನ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ನಾರದರು ಉಪದೇಶ ಮಾಡಿದಂತೆ ದೇವಿಯು ಶಿವನನ್ನು ಪತಿಯನ್ನಾಗಿ ಪಡೆಯುವುದಕ್ಕೆ ತಪಸ್ಸು ಮಾಡುತ್ತಾಳೆ. ಒಂದು ಸಾವಿರ ವರ್ಷಗಳ ಕಾಲ ದೇವಿಯು ಹಣ್ಣು- ಎಲೆಗಳನ್ನು ತಿಂದು ಜೀವಿಸುತ್ತಾಳೆ. ಆ ನಂತರ ಒಂದು ಸಾವಿರ ವರ್ಷ ಕೇವಲ ನೆಲದ ಮೇಲೆ ಬಿದ್ದ ಒಣಗಿದ ಬಿಲ್ವಪತ್ರೆಗಳನ್ನು ಮಾತ್ರ ಸೇವಿಸುತ್ತಾಳೆ. ಅದಾದ ಮೇಲೆ ಅವುಗಳನ್ನು ಸಹ ಸೇವಿಸುವುದನ್ನು ನಿಲ್ಲಿಸುತ್ತಾಳೆ. ಹೀಗೆ ಸಾವಿರಾರು ವರ್ಷ ಆಹಾರವನ್ನೂ ಸೇವಿಸದೆ ತಪಸ್ಸು ಮಾಡಿದ ದೇವಿಯು ಎಲೆಗಳನ್ನು ಸಹ ಸೇವಿಸುವುದನ್ನು ನಿಲ್ಲಿಸಿದ್ದರಿಂದ ಆ ತಾಯಿಗೆ 'ಅಪರ್ಣಾ' ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ತಾಯಿಯ ಆ ತಪಸ್ಸಿಗೆ ದೇವತೆಗಳ ಮೆಚ್ಚಿ, ಆ ಸಾಕ್ಷಾತ್ ಚಂದ್ರಮೌಳಿಯೇ ನಿನ್ನ ಪತಿಯಾಗುತ್ತಾನೆ, ಇನ್ನು ತಪಸ್ಸನ್ನು ನಿಲ್ಲಿಸಿ, ಮನೆಗೆ ಹೋಗುವಂತೆ ಹೇಳುತ್ತಾರೆ. ಅಂದ ಹಾಗೆ ಅಂಥ ಕಠಿಣ ತಪಸ್ಸು ಮಾಡಿದ್ದರಿಂದ ಕೃಶ ಕಾಯಳಾಗಿದ್ದ ತನ್ನ ಮಗಳನ್ನು ಆಕೆಯ ತಾಯಿಯಾದ ಮೇನಾ ದೇವಿ “ಉಮಾ” ಹೀಗೆ ಮಾಡಬೇಡ ಎಂದು ಕೇಳಿಕೊಳ್ಳುತ್ತಾರೆ. ಆದ್ದರಿಂದ ಬ್ರಹ್ಮಚಾರಿಣಿ ದೇವಿಯ ಇನ್ನೊಂದು ಹೆಸರು ಉಮಾ ಅಂತಲೂ ಇದೆ. ಈ ಕಠಿಣ ತಪಸ್ಸಿಗೆ ನಂತರ ಶಿವನೇ ಪರೀಕ್ಷೆ ನೀಡುತ್ತಾನೆ. ವೃದ್ಧನಾಗಿ ಬಂದ ಶಿವ ಪರೀಕ್ಷೆ ವಿಫಲವಾಗಿ ಬ್ರಹ್ಮಚಾರಿಣಿಯ ತಪಸ್ಸಿಗೆ ಮನಸೋತು ನಂತರ ಕಲ್ಯಾಣದಲ್ಲಿ ಅಂತ್ಯವಾಗುತ್ತದೆ.
ಯಾರ ಸಹಾಯವೂ ದೊರೆಯದೆ ಜೀವನದಲ್ಲಿ ಕಷ್ಟ ಪಡುತ್ತಾ ತಾಳ್ಮೆಯಿಂದ ಇರುವವರಿಗೆ ಈ ದೇವಜಾತಾ ಸ್ವರೂಪಿಣಿಯ ಆರಾಧನೆಯಿಂದ ಅನಿರೀಕ್ಷಿತ ಸಹಾಯಗಳು ಲಭಿಸುತ್ತವೆ ಎಂಬುವುದೇ ಈ ಕಥೆಯ ಸಾರಾಂಶ. ಮನುಷ್ಯನ ತಾಳ್ಮೆಯ ಶಕ್ತಿಯ ಅವತಾರದ ಪ್ರತಿಬಿಂಬವೇ ಈ ತಾಯಿ. ಪುರಾಣದಲ್ಲೊಂದು ಕಥೆ ಆಯಾಯ ಊರಿಗೆ ಅನುಸಾರವಾಗಿ ಅನೇಕ ಕಥೆಗಳು. ಇದು ಇತಿಹಾಸದ ಸೌಂದರ್ಯದ ಮೆಲುಕು.
ಯಾ ದೇವಿ ಸರ್ವಭೂತೇಷು ಮಾ ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ| ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ