ಮಂಗಳೂರು : ಬ್ರಹ್ಮನ ಸೃಷ್ಟಿಕಾರ್ಯಕ್ಕೆ ವರವಾದ ಶೈಲಪುತ್ರಿ ..?!
Mon, Sep 22 2025 09:22:56 PM
ಮಂಗಳೂರು, ಸೆ. 22 (DaijiworldNews/TA): ನಾಡಿನೆಲ್ಲೆಡೆ ನವರಾತ್ರಿಯ ಸಡಗರ. ನವರಾತ್ರಿ, ಒಂಭತ್ತು ದೇವಿ ರೂಪಕಗಳ ಪವಿತ್ರ ಪೂಜೆಯ ಮಹತ್ತರ ಆಚರಣೆ. ಒಂಭತ್ತು ದಿನ ನವದೇವಿಯರನ್ನು ಆರಾಧಿಸಲಾಗುತ್ತೆ. ಕೊನೆಗೆ ವಿಜಯದ ಸಂಕೇತವಾಗಿ ವಿಜಯದಶಮಿ ಆಚರಣೆ ಕೂಡ ರೂಡಿಯಲ್ಲಿದೆ. ಮಹಿಷನ ಸಂಹಾರಕ್ಕಾಗಿ ಅವತರಿಸೋ ದುರ್ಗೆಯ ಅವತಾರಗಳ ಐತಿಹ್ಯವೇ ಅದ್ಭುತ. ನವರಾತ್ರಿಯ ಮೊದಲ ದಿನ ಶೈಲಪುತ್ರಿ ರೂಪದಲ್ಲಿ ದೇವಿಯನ್ನು ಆರಾಧನೆ ಮಾಡಲಾಗುತ್ತೆ. ಈ ಆರಾಧನೆಯ ಹಿಂದೊಂದು ಅಚ್ಚಳಿಯದ ಕಥೆ ಇದೆ.
ವಂದೇ ವಾಂಛಿ ತಲಾಭಾಯ ಚಂದ್ರಾರ್ಧಕೃತ ಶೇಖರಾಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ |
ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ತಾಯಿಯೇ ಶೈಲಪುತ್ರೀ ದೇವಿ, ಪರ್ವತ ರಾಜನ ಮಗಳಾದ ಕಾರಣ ಶೈಲಾ ಪುತ್ರೀ ಹೆಸರು ಎಂಬುದು ನಂಬುಗೆ. ಹಿಮಾಲಯದ ರಾಜ ಹಿಮವಂತನ ಮಗಳಾಗಿ ಹುಟ್ಟಿದ ದೇವಿ. ಇನ್ನು ಆಕೆಯನ್ನು ಸತಿ ಭವಾನಿ, ಹೇಮಾವತಿ ಮತ್ತು ಪಾರ್ವತಿ ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ತಾಯಿ ಶೈಲಪುತ್ರಿಯನ್ನು ದುರ್ಗಾ ದೇವಿಯ ಮೊದಲ ಮತ್ತು ಪ್ರಮುಖ ರೂಪವೆಂದು ಪೂಜಿಸಲಾಗುತ್ತದೆ, ಶಕ್ತಿ, ಪರಿಶುದ್ಧತೆ ಮತ್ತು ದೈವತ್ವವನ್ನು ಒಳಗೊಂಡಿರುವ ತಾಯಿ ಈಕೆ.
ತಾಯಿ ಶೈಲಪುತ್ರಿಯು ಸತಿಯ ಪುನರ್ಜನ್ಮದ ರೂಪ. ದಕ್ಷ ರಾಜನ ಮಗಳು ಮತ್ತು ಶಿವನ ಪತ್ನಿ. ಹಿಂದೂ ಪುರಾಣ ಕಥೆಯ ಪ್ರಕಾರ, ಸತಿಯು ತನ್ನ ತಂದೆಯು ಆಯೋಜಿಸಿದ ಯಾಗಕ್ಕೆ ಹೋಗಲು ಬಯಸಿದ್ದಳು. ಆದರೆ ಆಹ್ವಾನವಿಲ್ಲದೆ ಹೋಗ ಬಾರದೆಂದು ಶಿವ ತಾಕೀತು ಮಾಡಿದ್ದ. ಆದರೂ ಸತಿ ಆ ಕಾರ್ಯಕ್ರಮಕ್ಕೆ ತವರಿಗೆ ಹೋಗಿದ್ದಳು ಅಲ್ಲಿ ದಕ್ಷನು ಶಿವನನ್ನು ಅಪಮಾನಿಸಿದ ಕಾರಣ, ಅದನ್ನು ಸಹಿಸಲಾಗದೆ ಅದೇ ಯಾಗ ಕುಂಡದಲ್ಲಿ ಆತ್ಮಾಹುತಿ ಮಾಡಿಕೊಂಡ ಉಲ್ಲೇಖವಿದೆ. ಇದೇ ಸತಿಯು ನಂತರ ಹಿಮವಂತನ ಮಗಳಾದ ಶೈಲಪುತ್ರಿಯಾಗಿ ಮರುಜನ್ಮ ಪಡೆದಳು. ಈ ರೀತಿಯಾಗಿ ಅವಳು ಪರ್ವತಗಳ ದೇವತೆ ಪಾರ್ವತಿ ಎಂದು ಕರೆಯಲ್ಪಟ್ಟಳು ಎಂಬುದು ಪುರಾಣದ ಉಲ್ಲೇಖ.
ಶೈಲಪುತ್ರಿಯು ಸತಿಯ ಪುನರ್ಜನ್ಮದ ರೂಪ ಇದು ಒಂದು ಉಲ್ಲೇಖ. ಇನ್ನೊಂದು ಕಥಾನಕದ ಪ್ರಕಾರ ಮಧು ಕೈಟಭ ಎಂಬ ರಕ್ಕಸರ ಶಮನವೂ ಪುರಾಣದಲ್ಲಿದೆ. ಬ್ರಹ್ಮನಿಗೆ ನೀಡಿದ ಉಪಟಲಕ್ಕೆ ದೇವಿಯೇ ಅವತರಿಸಿ ರಕ್ಕಸರಿಗೆ ಅಂತ್ಯಹಾಡಿದ ಕಥೆಯೊಂದಿದೆ. ಹೌದು ಪುರಾಣಗಳ ಪ್ರಕಾರ ಒಂದು ಉಲ್ಲೇಖ ಇದೆ. ಅದರಂತೆ, ಮಹಾವಿಷ್ಣುವಿನ ನಾಭಿ ಕಮಲದಲ್ಲಿ ನೆಲೆಸಿದ ಬ್ರಹ್ಮನಿಗೆ ವಿಷ್ಣುವಿನ ಕಿವಿಗಳ ಕಶ್ಮಲದಿಂದ ಉದ್ಭವಿಸುವ ಮಧು ಹಾಗೂ ಕೈಟಭ ಎಂಬ ರಕ್ಕಸರಿಬ್ಬರು ಬಹಳ ತೊಂದರೆ ನೀಡುತ್ತಿರುತ್ತಾರೆ. ಅದರಿಂದಾಗಿ ಸೃಷ್ಟಿ ಕಾರ್ಯದಲ್ಲಿ ಅಡಚಣೆ ಎದುರಿಸುವ ಬ್ರಹ್ಮದೇವ ಈ ಇಬ್ಬರು ರಾಕ್ಷಸರ ಸಂಹಾರಕ್ಕಾಗಿ ಮಹಾವಿಷ್ಣುವನ್ನು ಪ್ರಾರ್ಥಿಸುತ್ತಾನೆ. ಆದರೆ, ಆ ಸಮಯದಲ್ಲಿ ಮಹಾವಿಷ್ಣು ಯೋಗನಿದ್ರಾವಸ್ಥೆಯಲ್ಲಿ ಇದ್ದುದರಿಂದ ಬ್ರಹ್ಮನ ಮೊರೆ ಆಲಿಸುವುದಿಲ್ಲ. ಆಗ ಬೇರೆ ದಾರಿಯೇ ಕಾಣದ ಬ್ರಹ್ಮ, ಆ ಮಹಾವಿಷ್ಣುವನ್ನು ಆವರಿಸಿರುವ ಯೋಗನಿದ್ರಾ ಸ್ವರೂಪದ ದೇವಿಯನ್ನು ಧ್ಯಾನಿಸಿ, ಸ್ತುತಿ ಮಾಡುತ್ತಾನೆ. ಆಗ ಪ್ರಸನ್ನಳಾಗುವ ದೇವಿಯು ಮಹಾವಿಷ್ಣುವು ಯೋಗನಿದ್ರೆಯಿಂದ ಹೊರಬರುವಂತೆ ಮಾಡಿ, ಅದರೊಂದಿಗೆ ಬ್ರಹ್ಮನಿಗೆ ಸಮಸ್ಯೆ ಮಾಡುತ್ತಿದ್ದ ಮಧು-ಕೈಟಭರ ವಧೆ ಆಗುವಂತೆ ಅನುಗ್ರಹಿಸುತ್ತಾಳೆ.
ಆದ್ದರಿಂದ ನವರಾತ್ರಿಯ ಮೊದಲ ದಿನ ಕಲಶದಲ್ಲಿ ಯೋಗನಿದ್ರಾ ಸ್ವರೂಪದ ದೇವಿಯನ್ನು ಧ್ಯಾನಿಸಿ, ಆವಾಹನೆ ಮಾಡಿ ಪೂಜಿಸಬೇಕು ಎಂಬುವುದೂ ಒಂದು ನಂಬಿಕೆಯ ಪದ್ಧತಿ. ಈ ದಿನದ ಬಣ್ಣ ಬಿಳಿ. ಇದು ಶಾಂತಿ ಮತ್ತು ನೆಮ್ಮದಿಯ ಸಂಕೇತ ಆಗಿದೆ. ಮಧು- ಕೈಟಭ ಎಂಬುವರು ರಾಕ್ಷಸರಾಗಿದ್ದರೂ ಇದು ಪ್ರತಿ ಮನುಷ್ಯನಲ್ಲಿಯೂ ಇರುವ ಪ್ರಧಾನವಾದ ಎರಡು ದುರ್ಗುಣಗಳು. ಮಧು ಎಂದರೆ ಜೇನು. ಅದಕ್ಕಿರುವ ಗುಣ ಅಂಟು. ನಾವು ಪ್ರಪಂಚದ ಎಲ್ಲ ವಿಷಯ ಭೋಗಗಳಿಗೆ ಅಂಟಿಕೊಂಡಿರುತ್ತೇವೆ. ಕೈಟಭ ಎಂದರೆ ಕೀಟ . ಸೃಷ್ಟಿಯ ನಾಶ ಮಾಡುತ್ತಾ ಇರುತ್ತೇವೆ. ಇವುಗಳನ್ನು ಅರಿತು, ಜಾಗೃತಗೊಳ್ಳಲು ಆಗದೆ ನಿದ್ರಾವಸ್ಥೆಯಲ್ಲಿ ಇರುವ ನಾವು ಶೈಲಪುತ್ರಿ ಸ್ವರೂಪದಿಂದ ಧ್ಯಾನಿಸಿ, ಪೂಜಿಸಿ ಮಾಯೆಯಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಬೇಕು ಎಂಬುವುದೇ ಸಂದೇಶ.
ಯಾ ದೇವಿ ಸರ್ವಭೂತೇಷು ಮಾ ಶೈಲಪುತ್ರೀ ರೂಪೇಣ ಸಂಸ್ಥಿತಾ। ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ ....