ಕಾರ್ಕಳ, ಮೇ. 09 (DaijiworldNews/AA): 2025-26 ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿ ಶ್ರೀ ಭುವನೇಂದ್ರ ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಸೇರ ಬಯಸುವ ಪ್ರತಿಭಾನ್ವಿತ ವಿದ್ಯಾಥಿಗಳಿಗೆ ಸಂಸ್ಥೆಯು ಕಾಲೇಜು ಶುಲ್ಕದಲ್ಲಿ ಶೇ. 50 ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಇದರ ಜೊತೆಗೆ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈ 3 ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶ್ರೀ ಭುವನೇಂದ್ರ ಕಾಲೇಜು ಪ್ರತಿಷ್ಠಿತ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಇದರ ಪ್ರಾಯೋಜಿತ ಸಂಸ್ಥೆಯಾಗಿದ್ದು ಕಳೆದ 65 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದರ ಜೊತೆಗೆ ಉತ್ತಮ ಫಲಿತಾಂಶದೊಂದಿಗೆ ರಾಜ್ಯದಲ್ಲಿ ಉತ್ತಮ ಶಿಕ್ಷಣ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಈ ಸುದೀರ್ಘ ಅವಧಿಯಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಶ್ರೀ ಭುವನೇಂದ್ರ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಹೊಂದಿದ್ದು, ಅನುಭವಿ, ನುರಿತ ಅಧ್ಯಾಪಕರನ್ನು ಹೊಂದಿರುತ್ತದೆ. ಮಾರ್ಚ್ 2025 ರಲ್ಲಿ 98% ಫಲಿತಾಂಶದ ಸಾಧನೆಯೊಂದಿಗೆ ಸಮಾಜದ ಕೆಳವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತ ಬಂದಿರುತ್ತದೆ. ಪ್ರತಿಯೊಂದು ವಿದ್ಯಾರ್ಥಿಯ ಶೈಕ್ಷಣಿಕ ಅಭಿವೃದ್ಧಿಯ ಕುರಿತಾಗಿ ವೈಯಕ್ತಿಕವಾಗಿ ಗಮನ ಹರಿಸುವುದು ಕಾಲೇಜಿನ ವಿಶೇಷತೆಗಳಲ್ಲೊಂದಾಗಿದೆ.
ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (MAHE) SAGES ಯೋಜನೆಯ ಮುಖಾಂತರ ಅಲ್ಲಿ ಅಭ್ಯವಿರುವ ವೈದ್ಯಕೀಯ, ಇಂಜಿನಿಯರಿಂಗ್, ಫಾಮರ್ಸಿ, ನರ್ಸಿಂಗ್ ಮುಂತಾದ ಕೋರ್ಸುಗಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಸಿಗುವುದರ ಜೊತೆಗೆ ಶೇ. 75 ರಷ್ಟು ಶುಲ್ಕ ವಿನಾಯಿತಿಯ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತೆ ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.