ಬಂಟ್ವಾಳ, ಫೆ.04 (DaijiworldNews/AA): ತಾಲೂಕಿನ ಶ್ರೀ ಕ್ಷೇತ್ರ ಕಶೆಕೋಡಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಇದೇ ತಾರೀಕು 03 ರಿಂದ 07 ರವರೆಗೆ ವಾರ್ಷಿಕ ಜಾತ್ರಾಮಹೋತ್ಸವ ಜರುಗಲಿದೆ. ಈ ಶುಭ ಸಂದರ್ಭದಲ್ಲಿ ಶ್ರೀ ದೇವರಿಗೆ ವಿಶೇಷವಾಗಿ ನೂತನ ಬ್ರಹ್ಮರಥ, ಬೆಳ್ಳಿಯ ಗರುಡ ಮತ್ತು ಸ್ವರ್ಣ ಲೇಪಿತ ಬೆಳ್ಳಿಯ ಪುಷ್ಪ ಕನ್ನಡಿ ಭಕ್ತ ಜನರಿಂದ ಸಮರ್ಪಿತವಾಗಲಿದೆ. ಈ ಪ್ರಯುಕ್ತ ವಿಶಾಲವಾದ ರಥಬೀದಿಯು ನಿರ್ಮಾಣಗೊಂಡು ರಥೋತ್ಸವಕ್ಕೆ ಇನ್ನಷ್ಟು ಮೆರಗು ನೀಡಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯವು ಊರ ಹಾಗೂ ಪರ ಊರ ಭಕ್ತಾಭಿಮಾನಿಗಳ, ಸಮಾಜ ಬಾಂಧವರ ಸಹಕಾರ ಹಾಗೂ ಸಹಯೋಗದಿಂದ ನೆರವೇರಿದೆ.

ಈ ವಿಶೇಷ ಜಾತ್ರೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಸ್ವಾಮೀಜಿಗಳಾದ ದಾಬೋಲಿಯ ಶ್ರೀಮದ್ ದತ್ತಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದೆ. ಸ್ವಾಮೀಜಿಯವರು ಪ್ರಯಾಗ್ ರಾಜ್ ನ ಕುಂಭಮೇಳದ ಸಂಗಮದಲ್ಲಿ ಅಮೃತ ಸ್ನಾನ ಮಾಡಿ, ನಾಸಿಕ್ ನಲ್ಲಿ ಜರುಗಿದ ಆಯುತ್ ಮಹಾಯಜ್ಞದಲ್ಲಿ ಪೂರ್ಣಾಹುತಿ ನೀಡಿ, ಶ್ರೀ ಕ್ಷೇತ್ರ ಗೋಕರ್ಣದ ಕೋಟಿ ತೀರ್ಥ ಸ್ನಾನದೊಂದಿಗೆ ರಥಸಪ್ತಮಿ ಆಚರಿಸಿ ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ನಂತರ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಂಜೆ ಬಂಟ್ವಾಳದ ಶ್ರೀ ಕಶೆಕೋಡಿ ದೇವಳವನ್ನು ತಲುಪಿದ್ದಾರೆ.
ಶ್ರೀಗಳಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಭಕ್ತಾದಿಗಳು ಶ್ರದ್ಧಾ ಭಕ್ತಿ ಗೌರವಾದರಗಳಿಂದ ಬರಮಾಡಿಕೊಂಡರು. ಸ್ವಾಮೀಜಿಗಳು ತಾರೀಕು 06 ರವರೆಗೆ ದೇವಳದ ಶ್ರೀ ಪೂರ್ಣಾನಂದ ಗುರು ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಭಕ್ತಾದಿಗಳು ಎಲ್ಲಾ ದಿನಗಳಲ್ಲಿ ಜಾತ್ರೋ ಮಹೋತ್ಸವ ಮತ್ತು ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಿ ಪೂರ್ವಕವಾಗಿ ಪಾಲ್ಗೊಂಡು ಶ್ರೀಗಳ ಕೃಪಾರ್ಶಿರ್ವಾದಕ್ಕೆ ಹಾಗೂ ಶ್ರೀ ಲಕ್ಷ್ಮಿ ವೆಂಕಟರಮಣ ದೇವರ ಕೃಪೆಗೆ ಪಾತ್ರರಾಗಿ ಪುನೀತರಾಗಬೇಕೆಂದು ಕೋರಲಾಗಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಸಂಜೀವ ನಾಯಕ್ ಕಲ್ಲೇಗ, ಅನುವಂಶಿಯ ಮೊಕ್ತೇಸರರಾದ ಗೋಪಾಲ ಶೆಣೈ ಕಂಟಿಕ, ಶಾಂತರಾಮ ಶೆಣೈ ಕಂಟಿಕ, ಮೊಕ್ತೇಸರರಾದ ಸತೀಶ್ ಶೆಣೈ ಬೋಳಂಗಡಿ, ಚಿದಾನಂದ ಪ್ರಭು ಒಡ್ಡೂರು, ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ದಯಾನಂದ ನಾಯಕ್ ಬೆಳ್ತಂಗಡಿ, ಕಾರ್ಯದರ್ಶಿಗಳಾದ ಸುಧಾಕರ ಪ್ರಭು ಪೆರ್ಮರೋಡಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಸಂಚಾಲಕರಾದ ಡಿ. ರಮೇಶ್ ನಾಯಕ್ ಮೈರ, ಅಧ್ಯಕ್ಷರಾದ ಮುರಳಿದರ ಪ್ರಭು ವಗ್ಗ, ಕಾರ್ಯದರ್ಶಿಗಳಾದ ರವೀಂದ್ರ ನಾಯಕ್, ಡಾ. ವಿಜಯಲಕ್ಷ್ಮೀ ನಾಯಕ್, ಡೆಚ್ಚಾರು ಗಣಪತಿ ಶೆಣೈ ಶ್ರೀನಿವಾಸ್ ಸಾಮಂತ್ ಬಾಲಕೃಷ್ಣ ಪ್ರಭು ಕೆಂಚಪಾಲು ಪುರೋಹಿತರಾದ ನಿತ್ಯಾನಂದ ಭಟ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಜೀರ್ಣೋದ್ದರ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಸ್ವಾಮೀಜಿಯವರ ಭಕ್ತ ಹಾಗೂ ಶಿಷ್ಯವೃಂದದವರು ಹಾಗೂ ಧಾರ್ಮಿಕ ಮುಖಂಡರುಗಳು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ರಾತ್ರಿ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವರ ಉತ್ಸವ ಬಲಿ, ಕುಣಿತ ಬಲಿ, ಮುಂತಾದ ಪಾರಂಪರಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಜರುಗಿತು.